ಕಳೆದ ಕೆಲ ವಾರಗಳಿಂದ ಹಲವು ಹಂತಗಳಲ್ಲಿ ಸಾಗುತ್ತಿದ್ದ ಸಿಸಿಎಲ್ನ ಫಿನಾಲೆ ಭಾನುವಾರ (ಮಾರ್ಚ್ 3) ನಡೆದಿದೆ. ಈ ಪಂದ್ಯದಲ್ಲಿ ಚೆನ್ನೈ ರೈನೋಸ್ ಹಾಗೂ ಪಂಜಾಬ್ ದೆ ಶೇರ್ ಮುಖಾಮುಖಿ ಆದವು. ಈ ವೇಳೆ ಚೆನ್ನೈ ತಂಡ ಸೋತಿದ್ದು, ಪಂಜಾಬ್ ತಂಡ ಗೆಲುವಿನ ನಗೆ ಬೀರಿದೆ. ಈ ಮೂಲಕ ಮೊದಲ ಬಾರಿಗೆ ಕಪ್ಗೆ ಮುತ್ತಿಟ್ಟಿದೆ. ಕರ್ನಾಟಕ ಬುಲ್ಡೋಜರ್ ತಂಡ ಸೆಮಿ ಫೈನಲ್ ಹಂತದಲ್ಲೇ ಸೋಲನ್ನು ಕಂಡಿತ್ತು.

ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ಚೆನ್ನೈ 89 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು. ನಂತರ ಬ್ಯಾಟ್ ಮಾಡಿದ ಪಂಜಾಬ್ 1 ವಿಕೆಟ್ ಕಳೆದುಕೊಂಡು 103 ರನ್ ಕಲೆ ಹಾಕಿತು. ಈ ಮೂಲಕ ಪಂಜಾಬ್ 14 ರನ್ಗಳ ಮುನ್ನಡೆ ಸಾಧಿಸಿತು. ನಂತರ ಬ್ಯಾಟ್ ಬೀಸಿದ ಚೆನ್ನೈ 85 ರನ್ ಗಳಿಸಲಷ್ಟೇ ಶಕ್ಯವಾಯಿತು.ಪಂಜಾಬ್ ತಂಡ 14 ರನ್ಗಳ ಮುನ್ನಡೆ ಸಾಧಿಸಿದ್ದರಿಂದ 72 ರನ್ಗಳನ್ನು ಬಾರಿಸಿದರೆ ಪಂಜಾಬ್ಗೆ ಗೆಲುವು ಸಿಗುತ್ತಿತ್ತು. ಇದನ್ನು ಕೇವಲ 8 ಓವರ್ಗಳಲ್ಲಿ ಚಚ್ಚಿ ಪಂಜಾಬ್ ಗೆಲುವಿನ ನಗೆ ಬೀರಿತು. ಈ ಮೂಲಕ 8 ವಿಕೆಟ್ಗಳ ಗೆಲುವು ಕಂಡಿತು. ಮೊದಲ ಬಾರಿಗೆ ಕಪ್ ಗೆದ್ದ ಖುಷಿಯನ್ನು ಪಂಜಾಬ್ ತಂಡ ಆಚರಿಸಿಕೊಂಡಿತು. ಚೆನ್ನೈ ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟುಕೊಂಡಿತು.
ಡಾರ್ಲಿಂಗ್ ಕೃಷ್ಣ ಅವರು ಈ ಬಾರಿ ಸಿಸಿಲ್ನಲ್ಲಿ ಕರ್ನಾಟಕ ಪರ ಅದ್ಭುತ ಪ್ರದರ್ಶನ ನೀಡಿದರು. ಅವರಿಗೆ ‘ಬ್ಯಾಟರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಸಿಕ್ಕಿದೆ. ಈ ಅವಾರ್ಡ್ ಪಡೆದು ಅವರು ಖುಷಿಪಟ್ಟಿದ್ದಾರೆ.





