
ಮಳೆಗಾಲದಲ್ಲಿ ಹಾವುಗಳು ಮನೆಯ ಸುತ್ತಮುತ್ತ ಕಾಣಿಸಿಕೊಳ್ಳುತ್ತವೆ. ಹಲವು ಬಾರಿ ಮನೆಯ ಮೂಲೆಯಲ್ಲಿ ಅಥವಾ ಬೆಚ್ಚಗೆಗಿರುವ ಸ್ಥಳಗಳಲ್ಲಿ ಅವಿತು ಕುಳಿತುಕೊಳ್ಳುವುದನ್ನು ನೀವು ನೋಡಿರಬಹುದು. ಸಾಮಾನ್ಯವಾಗಿ ಒಂದು ಹಾವು ಕಣ್ಣಿಗೆ ಬಿದ್ದ ಕೂಡಲೇ ಎದೆ ಹಿಡಿದು ಓಡಿ ಹೋಗುವವರೇ ಹೆಚ್ಚು. ಆದರೆ ಇದೀಗ ಮನೆಯ ನೆಲ ಮಾಳಿಗೆಯ ಗೂಡಿನಂತಹ ರಚನೆಯಲ್ಲಿ ಹತ್ತಕ್ಕೂ ಹೆಚ್ಚು ಹಾವುಗಳು ಕಂಡು ಬಂದಿದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್ ಆಗಿದ್ದು, ಈ ದೃಶ್ಯವು ಎಲ್ಲರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಈ ಘಟನೆಯೂ ಉತ್ತರ ಪ್ರದೇಶದ ಮಹಾರಾಜ್‌ಗಂಜ್ನ ಹಾರ್ದಿದಾಲಿ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಸಂಸ್ಥೆ ಭಾರತ ಸಮಾಚಾರ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನೆಲಮಾಳಿಗೆಯ ಗೂಡಿನಂತಹ ರಚನೆಯಲ್ಲಿ ಹತ್ತಕ್ಕೂ ಹೆಚ್ಚು ಹಾವುಗಳನ್ನು ಕಾಣಬಹುದು. ಹಾವುಗಳು ಗಿಜಿಗುಟ್ಟುತ್ತಾ ನಿಧಾನವಾಗಿ ಚಲಿಸುತ್ತಿದೆ. ಈ ದೃಶ್ಯವು ಒಂದು ಕ್ಷಣ ಮೈ ಜುಮ್ ಎನ್ನುವಂತೆ ಮಾಡುತ್ತದೆ. ಮನೆಯ ನೆಲಮಾಳಿಗೆಯ ಮೇಲೆ ಹಾವುಗಳ ರಾಶಿಯನ್ನು ಕಂಡ ಗ್ರಾಮಸ್ಥರು ತಕ್ಷಣವೇ ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.





