
ಇಂಡಿಯನ್ ಪ್ರೀಮಿಯರ್ ಲೀಗ್ನ 29ನೇ ಪಂದ್ಯದ ಮೂಲಕ ಕರುಣ್ ನಾಯರ್ ಐಪಿಎಲ್ಗೆ ಕಂಬ್ಯಾಕ್ ಮಾಡಿದ್ದಾರೆ. ಈ ಕಂಬ್ಯಾಕ್ ಪಂದ್ಯದಲ್ಲೇ ಆಕರ್ಷಕ ಅರ್ಧಶತಕವನ್ನೂ ಸಹ ಬಾರಿಸಿದ್ದಾರೆ. ಅದು ಕೂಡ 7 ವರ್ಷಗಳ ಬಳಿಕ ಎಂಬುದೇ ಅಚ್ಚರಿ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮಾ 33 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 59 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಿತು.ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ ಮೂರನೇ ಕ್ರಮಾಂಕದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕರುಣ್ ನಾಯರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಈ ಪಂದ್ಯದಲ್ಲಿ 40 ಎಸೆತಗಳನ್ನು ಎದುರಿಸಿದ ಕರುಣ್ 5 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 89 ರನ್ ಬಾರಿಸಿದರು. ಈ ಸ್ಪೋಟಕ ಇನಿಂಗ್ಸ್ನ ಹೊರತಾಗಿಯೂ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 12 ರನ್ಗಳಿಂದ ಸೋಲೊಪ್ಪಿಕೊಂಡಿತು.





