ಬಜೆಟ್ ಭಾಷಣದ ಮೇಲಿನ ಚರ್ಚೆ ವೇಳೆ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಮಾಡಿದ ಶಾಸಕ ಯತ್ನಾಳ್, ರಾಜ್ಯದಲ್ಲಿ ಸಹಕಾರಿ ಸಚಿವರ ಮೇಲೆ ಹನಿಟ್ರ್ಯಾಪ್ ಮಾಡುವ ಪ್ರಯತ್ನ ಮಾಡಲಾಗಿದೆ. ಇದೊಂದು ಕೆಟ್ಟ ಸಂಸ್ಕೃತಿ. ಜನಪ್ರತಿನಿಧಿಗಳನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇದರ ಹಿಂದಿನ ನಟ, ನಿರ್ಮಾಪಕ, ನಿರ್ದೇಶಕ ಯಾರು ? ”ಸಿ.ಡಿ, ಪೆನ್ಡ್ರೈವ್ ಮಾಡುತ್ತಿರುವವರು 50 ಜನರ ಮೇಲೆ ಹನಿಟ್ರ್ಯಾಪ್ ಮಾಡಿದ್ದಾರೆ. ಇದು ನಮ್ಮ ರಾಜ್ಯಕ್ಕೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದ ವಿವಿಧ ಪಕ್ಷಗಳ ನಾಯಕರು, ಮುಖಂಡರ ಹನಿಟ್ರ್ಯಾಪ್ ಪೆನ್ಡ್ರೈವ್ ಕೂಡ ಇದೆ. ನನ್ನ ಮೇಲಿನ ಆರೋಪಕ್ಕೆ ನಾನು ಇಲ್ಲಿ ಉತ್ತರ ಕೊಡಲ್ಲ. ನಾನು ಈ ಬಗ್ಗೆ ಗೃಹ ಸಚಿವರಿಗೆ ಲಿಖಿತ ದೂರು ಕೊಡುತ್ತೇವೆ. ಇದನ್ನು ತನಿಖೆ ಮಾಡಬೇಕು. ಇದರ ಹಿಂದೆ ನಟ ಯಾರು, ಯಾರು ನಿರ್ಮಾಪಕರು, ನಿರ್ದೇಶಕರು ಯಾರಿದ್ದಾರೆ, ಇವೆಲ್ಲವೂ ಹೊರಗಡೆ ಬರಲಿ. ಜನರಿಗೆ ಗೊತ್ತಾಗಲಿ” ಎಂದು ಸಚಿವ ರಾಜಣ್ಣ ಒತ್ತಾಯಿಸಿದರು.
”ನಾನು ಗೃಹ ಸಚಿವರಿಗೆ ಲಿಖಿತ ದೂರು ಕೊಡುತ್ತೇನೆ. ಈ ಬಗ್ಗೆ ಸೂಕ್ತ ತನಿಖೆ ಆಗಲಿ. ಈ ಹನಿಟ್ರ್ಯಾಪ್ ಪ್ರಕರಣ ಸಾರ್ವಜನಿಕವಾಗಿ ಬಹಿರಂಗ ಆಗಲಿ. ಇದೊಂದು ಪಿಡುಗು. ನನ್ನ ಮೇಲೆ ಯತ್ನಿಸಲಾದ ಹನಿಟ್ರ್ಯಾಪ್ ಬಗ್ಗೆ ಪುರಾವೆ ಇಟ್ಟುಕೊಂಡಿದ್ದೇನೆ. ಗೃಹ ಮಂತ್ರಿಗಳಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

ರಾಜ್ಯ ಸಿ.ಡಿ ಕಾರ್ಖಾನೆ ಆಗುತ್ತಿದೆ : ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಕೆ.ಎನ್. ರಾಜಣ್ಣ, ”ರಾಜ್ಯವು ಪೆನ್ಡ್ರೈವ್, ಸಿ.ಡಿ ಕಾರ್ಖಾನೆ ಆಗುತ್ತಿದೆ ಎಂಬ ಚರ್ಚೆ ದೇಶದಲ್ಲಿ ನಡೆಯುತ್ತಿದೆ. ಇದೊಂದು ಗುರುತರವಾದ ಆರೋಪವಾಗಿದೆ. ಹನಿಟ್ರ್ಯಾಪ್ ಯತ್ನದಲ್ಲಿ ತುಮಕೂರಿನ ಪ್ರಭಾವಿ ಸಚಿವರ ಹೆಸರು ಕೇಳುಬರುತ್ತಿದೆ. ತಮಕೂರಿನ ಪ್ರಭಾವಿ ಸಚಿವರೆಂದರೆ, ನಾನೊಬ್ಬ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಇದ್ದೇವೆ” ಎಂದರು.
ಹನಿಟ್ರ್ಯಾಪ್ ಮೂಲಕ ಕಟ್ಟಿ ಹಾಕಿದರೆ ಹೇಗೆ ?
”ಇದೇ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಸುನಿಲ್ ಕುಮಾರ್, ಯಾವುದೇ ಕಾರಣಕ್ಕೂ ಈ ರೀತಿಯ ಘಟನೆ ಆಗಬಾರದು. ವಿರೋಧ, ವೈಷಮ್ಯ ಸಿದ್ಧಾಂತದ ಆಧಾರದ ಮೇಲೆ ನಡೆಯಲಿ. ಯೋಜನೆಗಳ ಮೂಲಕ ನಡೆಯಲಿ, ಕಾರ್ಯಕ್ರಮಗಳ ಮೂಲಕ ವಿರೋಧ ಮಾಡಲಿ. ಅದು ಬಿಟ್ಟು ಹನಿಟ್ರ್ಯಾಪ್ ಮೂಲಕ ಕಟ್ಟಿ ಹಾಕುವ ಪ್ರಯತ್ನ ಮಾಡಿದರೆ ಹೇಗೆ?” ಎಂದು ಖಾರವಾಗಿ ಪ್ರಶ್ನಿಸಿದರು.
”50 ಜನರ ಮೇಲೆ ಈ ತರ ಹನಿಟ್ರ್ಯಾಪ್ ಆಗಿದೆ ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಇದಕ್ಕೆ ಗೃಹ ಸಚಿವರು ಇಲ್ಲೇ ಉತ್ತರ ಕೊಡಬೇಕು. ಹೀಗೆ ಮಾಡಿದರೆ ರಾಜ್ಯದ ಜನರ ಪರಿಸ್ಥಿತಿ ಏನಾಗುತ್ತದೆ?. ಸರ್ಕಾರನೇ ಇದಕ್ಕೆ ಬೆಂಬಲವಾಗಿ ನಿಂತಿದೆಯಾ?. ಇಲ್ಲವಾದರೆ ಯಾರು ಆ ಪ್ರಭಾವಿ ಮಂತ್ರಿ?. ನಿಮ್ಮ ಪಕ್ಷದಲ್ಲಿ ಯಾರ ಯಾರ ಮೇಲೆ ಹನಿಟ್ರ್ಯಾಪ್ ಆಗಿದೆ. ನಮ್ಮ ಪಕ್ಷದಲ್ಲಿ ಯಾರ ಯಾರ ಮೇಲೆ ಆಗಿದೆ ಎಂದು ಗೊತ್ತಾಗಲಿ. ಇದು ಗಂಭೀರ ವಿಚಾರವಾಗಿದೆ. ಈ ಬಗ್ಗೆ ಸುಮ್ಮನೆ ಇರಲು ಸಾಧ್ಯವಿಲ್ಲ” ಎಂದರು.
”ನಿಮ್ಮ ಜಿಲ್ಲೆಯ ಸಚಿವರಿಗೇ ಈ ಪರಿಸ್ಥಿತಿ ಆದರೆ ಇನ್ನು ರಾಜ್ಯದ ಜನರ ಪರಿಸ್ಥಿತಿ ಏನು?. ಇದು ಗೌರವದ ಪ್ರಶ್ನೆ. ಯಾರು ಇದರ ಹಿಂದೆ ಇದ್ದಾರೆ? ಯಾರ ಕೈವಾಡ ಇದೆ?. ಅಷ್ಟು ದೊಡ್ಡ ಸಚಿವರಿಗೆ ಯಾರು ಹನಿಟ್ರ್ಯಾಪ್ ಮಾಡುತ್ತಿದ್ದಾರೆ? ಇದಕ್ಕೆ ಸರ್ಕಾರವೇ ಬೆಂಬಲವಾಗಿ ನಿಂತಿದೆಯಾ? ಅಥವಾ ಒಬ್ಬ ವ್ಯಕ್ತಿ ಮಾತ್ರ ಬೆಂಬಲವಾಗಿ ನಿಂತಿದ್ದಾರಾ? ರಾಜಕಾರಣಕ್ಕೆ ಏನು ಬೇಕಾದರೂ ಮಾಡ್ತಾರೆ ಅಂದರೆ ಸಹಿಸಲು ಆಗಲ್ಲ. ನಾಳೆ ಎಲ್ಲರ ಮೇಲೂ ಇದು ಬರಬಹುದು. ಇದು ರಾಜಕಾರಣದ ಪ್ರಶ್ನೆ ಅಲ್ಲ, ಗೌರವದ ಪ್ರಶ್ನೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ”ಇದೊಂದು ಗಂಭೀರವಾದ ವಿಚಾರವಾಗಿದೆ. ಬೇರೆಲ್ಲ ಪ್ರಕರಣಗಳಿಗೂ ಎಸ್ಐಟಿ ಮಾಡ್ತೀರಾ. ಈ ಪ್ರಕರಣ ಬಗ್ಗೆ ನೇರವಾಗಿ ಮಂತ್ರಿಗಳೇ ಹೇಳಿದ್ದಾರೆ. ಅವರಿಂದ ದೂರು ಪಡೆದು ಹನಿಟ್ರ್ಯಾಪ್ ಆರೋಪ ಬಗ್ಗೆ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ. ಇದರಿಂದ ಎಲ್ಲರಿಗೂ ನ್ಯಾಯ ಸಿಗುತ್ತದೆ. ಸದನದಲ್ಲಿ ಮಂತ್ರಿಯೊಬ್ಬರು ಮಾತನಾಡುತ್ತಾರೆ ಅಂದರೆ ನಾವು, ನೀವು ಗಂಭೀರವಾಗಿ ತಗೋಬೇಕು. ಎಸ್ಐಟಿ ಮಾಡ್ತೀರೋ, ಯಾವ ತನಿಖೆ, ಯಾರ ನೇತೃತ್ವದಲ್ಲಿ ತನಿಖೆ ಮಾಡ್ತೀರಿ ಅಂತ ಘೋಷಣೆ ಮಾಡಿ. ಸದನದಲ್ಲೇ ಯಾವ ತನಿಖೆ ಎಂಬುದನ್ನು ತಿಳಿಸಲಿ” ಎಂದು ಒತ್ತಾಯಿಸಿದರು.
ನನ್ನ ಜೀವನ ಹಾಳು ಮಾಡಿದರು : ಇದೇ ವೇಳೆ ಎದ್ದು ನಿಂತ ಶಾಸಕ ಮುನಿರತ್ನ ಆವೇಶಭರಿತವಾಗಿ ಮಾತನಾಡಿ, ”ಪ್ರತ್ಯಂಗಿರ, ಶನಿ ದೇವರು, ಅಜ್ಜಯ್ಯನ ಭಾವಚಿತ್ರ ತೋರಿಸಿ, ನಾನು ಅತ್ಯಾಚಾರ ಮಾಡಿಲ್ಲ ಎಂದು ಇವರ ಮೇಲೆ ಆಣೆ ಮಾಡುತ್ತೇನೆ. ಸುಳ್ಳು ದೂರು ಕೊಡಿಸಿದವರು ಪ್ರಮಾಣ ಮಾಡುತ್ತಾರಾ?. ನಾನು ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ. ಹೀಗೆಲ್ಲ ಜೀವನ ಹಾಳು ಮಾಡಬೇಕಾ?. ನನ್ನ ಜೀವನ ಹಾಳು ಮಾಡಲು ಆರೋಪ ಮಾಡಲಾಗಿದೆ. ಯಾವಳನ್ನೋ ಕರೆದುಕೊಂಡು ಬಂದು ರಾಮನಗರದಲ್ಲಿ ದೂರು ಕೊಡಿಸಿದ್ದಾರೆ. ಐದು ವರ್ಷದ ಹಿಂದಿನ ಕೇಸ್ ಅದು. ನಾನು ಮಾಡಿದ ತಪ್ಪೇನು? ಸುಳ್ಳು ಕೇಸ್ ಹಾಕಿಸಿ ಜೀವನ ಹಾಳು ಮಾಡುತ್ತಿದ್ದಾರೆ. ಇವರಿಗೂ ಮಕ್ಕಳು ಮರಿ ಇಲ್ವಾ? ವಂಶ ಇಲ್ವಾ?” ಎಂದು ಆಕ್ರೋಶ ಹೊರಹಾಕಿದರು.
ಉನ್ನತ ಮಟ್ಟದ ತನಿಖೆಗೆ ಸೂಚನೆ : ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ”ಇದು ಸದನದ ಪ್ರತಿ ಸದಸ್ಯನ ಪ್ರಶ್ನೆ, ಸದಸ್ಯನ ಗೌರವದ ಪ್ರಶ್ನೆ. ಇದಕ್ಕೆ ಫುಲ್ಸ್ಟಾಪ್ ಹಾಕಬೇಕು. ಕರ್ನಾಟಕ ವಿಧಾನಮಂಡಲವು ದೇಶದಲ್ಲೇ ಬಹಳ ಗೌರವವನ್ನು ಹೊಂದಿದೆ. ದೊಡ್ಡ ದೊಡ್ಡ ವ್ಯಕ್ತಿಗಳು ಸದನದ ಸದಸ್ಯರಾಗಿದ್ದರು. ಸದನದಲ್ಲಿ ಹಲವು ಕುರುಹುಗಳನ್ನು ಬಿಟ್ಟಿದ್ದಾರೆ. ಗೌರವವನ್ನು ಬಿಟ್ಟು ಹೋಗಿದ್ದಾರೆ. ಅದರ ಗೌರವ, ಮರ್ಯಾದೆ, ಸದಸ್ಯರ ಮರ್ಯಾದೆ ಕಾಪಾಡಬೇಕಾಗಿದೆ. ಹಾಗಾಗಿ, ಇದಕ್ಕೆಲ್ಲ ಇತಿಶ್ರೀ ಹಾಡಬೇಕು. ಇದರಿಂದ ಬಹಳಷ್ಟು ಮಂದಿಯ ಮರ್ಯಾದೆ ಹೋಗುತ್ತದೆ. ಸಚಿವ ರಾಜಣ್ಣರ ಮನವಿ ಮೇರೆಗೆ ಉನ್ನತ ಮಟ್ಟದ ತನಿಖೆ ಮಾಡುತ್ತೇನೆ. ಸತ್ಯಾಸತ್ಯತೆ ಗೊತ್ತಾಗಬೇಕು” ಎಂದು ಸದನಕ್ಕೆ ಮಾಹಿತಿ ನೀಡಿದರು.





