ಸಿಡ್ನಿ: ಕ್ರೀಡಾಲೋಕದ ಸಾರ್ವಕಾಲಿಕ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ಅವರ ದಶಕಗಳ ಕಾಲದ ದಾಖಲೆಯೊಂದನ್ನು ಆಸ್ಟ್ರೇಲಿಯಾದ 18 ವರ್ಷದ ಉದಯೋನ್ಮುಖ ಪ್ರತಿಭೆ ಗೌಟ್ ಗೌಟ್ ಅಳಿಸಿಹಾಕಿದ್ದಾರೆ. ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಮಿಂಚಿನ ವೇಗ ಪ್ರದರ್ಶಿಸಿದ ಗೌಟ್ ಗೌಟ್, ಕೇವಲ 19.67 ಸೆಕೆಂಡ್ಗಳಲ್ಲಿ ಗುರಿ ತಲುಪಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಈ ಮೂಲಕ 200 ಮೀಟರ್ ಓಟದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಈ ಹಿಂದೆ ವಿಶ್ವ ದಾಖಲೆ ವೀರ ಉಸೇನ್ ಬೋಲ್ಟ್ ಅವರು 23 ವರ್ಷ ತುಂಬುವ ಮುನ್ನ 200 ಮೀಟರ್ ಓಟವನ್ನು 19.93 ಸೆಕೆಂಡ್ಗಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದರು. ಆದರೆ ಗೌಟ್ ಗೌಟ್ ಅವರು ಬೋಲ್ಟ್ಗಿಂತಲೂ ವೇಗವಾಗಿ ಗುರಿ ತಲುಪುವ ಮೂಲಕ ಕ್ರೀಡಾ ಜಗತ್ತನ್ನು ಬೆರಗುಗೊಳಿಸಿದ್ದಾರೆ. ಕಳೆದ ವರ್ಷವಷ್ಟೇ 20.02 ಸೆಕೆಂಡ್ಗಳಲ್ಲಿ ಓಡಿ ಗಮನ ಸೆಳೆದಿದ್ದ ಈ ಯುವಕ, ಈಗ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇನ್ನು ಇದೇ ಸ್ಪರ್ಧೆಯಲ್ಲಿ ಅಡಿನಂ ಮಾರ್ಫಿ (19.88 ಸೆಕೆಂಡ್) ದ್ವಿತೀಯ ಸ್ಥಾನ ಹಾಗೂ ಕ್ಯಾಲನ್ ಲಾ (20.21 ಸೆಕೆಂಡ್) ತೃತೀಯ ಸ್ಥಾನ ಪಡೆದಿದ್ದಾರೆ. ಈ ಸಾಧನೆಯೊಂದಿಗೆ ಗೌಟ್ ಗೌಟ್ ಅವರನ್ನು ಅಥ್ಲೆಟಿಕ್ಸ್ ಲೋಕದ ‘ಮುಂದಿನ ಬೋಲ್ಟ್’ ಎಂದೇ ಬಣ್ಣಿಸಲಾಗುತ್ತಿದೆ.





