
ಹಾಸನ ತಾಲೂಕಿನ ಕೆಲವತ್ತಿ ಗ್ರಾಮದ ಕವನ ಕೆ.ವಿ. (21) ಹೃದಯಾಘಾತಕ್ಕೊಳಗಾದ ಯುವತಿ. ಕೆಲವತ್ತಿ ಗ್ರಾಮದ ಪಾಪಣ್ಣ ಹಾಗೂ ಗಾಯತ್ರಿ ದಂಪತಿ ಪುತ್ರಿ ಕವನಾ ಹಾಸನ ನಗರದ ಎಂ.ಜಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. ಪದವಿ ಪರೀಕ್ಷೆ ನಡೆಯುತ್ತಿದ್ದು, ಈಗಾಗಲೇ ಆಕೆ 3 ವಿಷಯಗಳ ಪರೀಕ್ಷೆ ಬರೆದಿದ್ದಳು. ಉಳಿದ ಮೂರು ವಿಷಯದ ಪರೀಕ್ಷೆಗಳನ್ನು ಬರೆಯಬೇಕಿತ್ತು.
ನಿನ್ನೆ ಸಂಜೆ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದಾಳೆ. ತಾಯಿ ಕುಡಿಯುವ ನೀರು ತರಲು ಹೇಳಿದ್ದು, ಅದರಂತೆ ಆಕೆ ಶುದ್ಧ ಕುಡಿಯುವ ನೀರಿನ ಘಟಕದಿಂದ ಮನೆಗೆ ನೀರು ತರುವಾಗ ಕವನಾಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಕವನಾ ತಾಯಿ ಬಳಿ ಕುಡಿಯಲು ನೀರು ಕೇಳಿದ್ದಾಳೆ. ತಾಯಿ ನೀರು ತಂದು ಕೊಡುವಷ್ಟರಲ್ಲಿ ಮನೆಯಲ್ಲಿಯೇ ಕುಸಿದು ಬಿದ್ದಿದ್ದಳು. ಕೂಡಲೇ ಪೋಷಕರು ಆಕೆಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಾಗಲೇ ಕವನಾ ಕೊನೆಯುಸಿರೆಳೆದಿದ್ದಳು.

ಸದ್ಯ ಮದುವೆ ವಯಸ್ಸಿಗೆ ಬಂದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಹಪಾಠಿಗಳು ಹಾಗೂ ಕಾಲೇಜು ಉಪನ್ಯಾಸಕ ವರ್ಗದಲ್ಲಿಯೂ ಶೋಕ ಮಡುಗಟ್ಟಿದೆ. ಇಂದು ಪರೀಕ್ಷೆ ಇದ್ದರೂ ಕೂಡಾ ಕೆಲವು ಸ್ನೇಹಿತರು ಮತ್ತು ಪ್ರಾಧ್ಯಾಪಕ ವರ್ಗ ಕೆಲವತ್ತಿಗೆ ತೆರಳಿ ಆಕೆಯ ಅಂತಿಮ ದರ್ಶನ ಪಡೆದಿದ್ದಾರೆ.

1 ಹೃದಯಾಘಾತದಿಂದ ಯುವತಿ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. ಸಂಧ್ಯಾ (19) ಮೃತ ಯುವತಿ. ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ನಿವಾಸಿಗಳಾದ ವೆಂಕಟೇಶ್-ಪೂರ್ಣಿಮ ದಂಪತಿ ಪುತ್ರಿ ಸಂಧ್ಯಾ ಅಂತಿಮ ವರ್ಷದ ಡಿಪ್ಲೊಮಾ ಮುಗಿಸಿದ್ದಳು. ಬಾತ್ರೂಂಗೆ ತೆರಳಿದ್ದ ವೇಳೆ ಸಂಧ್ಯಾ ಕುಸಿದು ಬಿದ್ದಿದ್ದಾಳೆ. ಕೂಡಲೇ ಬಾತ್ರೂಂ ಬಾಗಿಲು ಒಡೆದು ಪೋಷಕರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು. ಆದರೆ ಅಷ್ಟು ಹೊತ್ತಿಗೆ ಸಂಧ್ಯಾಳ ಜೀವ ನಿಂತಿತ್ತು.

2 ಬೆಂಗಳೂರಿನಲ್ಲಿ ಹಾಸನ ಯುವಕ ಸಾವು
ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅರಕಲಗೂಡು ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ. ಮೃತನನ್ನು ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಅಭಿಷೇಕ್ (19) ಎಂದು ಗುರುತಿಸಲಾಗಿದೆ. ಯುವಕ, ಗ್ರಾಮದ ಅನಸೂಯ ಹಾಗೂ ರಾಮಕೃಷ್ಣ ದಂಪತಿ ಪುತ್ರ ಎಂದು ತಿಳಿದು ಬಂದಿದೆ.





