
ಕೊಯಮತ್ತೂರು ಜಿಲ್ಲೆಯ ವಾಲ್ಪಾರೈನಲ್ಲಿ ಮೃತ ಆನೆಯ ದಂತವನ್ನು ಕದ್ದು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಮಣಂಪಲ್ಲಿ ಅರಣ್ಯ ಮೀಸಲು ಅಧಿಕಾರಿ ಗಿರಿಧರನ್ ಮತ್ತು ವಾಲ್ಪಾರೈ ಅರಣ್ಯ ಮೀಸಲು ಅಧಿಕಾರಿ ಸುರೇಶ್ ಕೃಷ್ಣನ್ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಅರಣ್ಯ ಅಧಿಕಾರಿಗಳ ತಂಡ ಕಾರ್ಯಾಚರಣೆ ಕೈಗೊಂಡಿತ್ತು.
ಜೂನ್ 21ರಂದು ವಾಲ್ಪಾರೈ ಬಳಿಯ ಥೈಮುಡಿ ಎನ್ಸಿ ಪ್ರದೇಶದಲ್ಲಿ, ಎರಡು ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ, ಅದೇ ಪ್ರದೇಶದ ಮಣಿಕಂಠನ್ (47), ರಾಜ (39), ಮತ್ತು ದೇವಪಾಲ (31) ಅವರನ್ನು ಬಂಧಿಸಿದ್ದಾರೆ. ಜೊತೆಗೆ ಅವರ ಬಳಿ ಇದ್ದ 5 ಅಡಿ ಉದ್ದ ಎರಡು ದಂತಗಳು ಹಾಗೂ ಕಳ್ಳಸಾಗಣೆಗಾಗಿ ಬಳಸುತ್ತಿದ್ದ ಐಷಾರಾಮಿ ಕಾರನ್ನು ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತನಿಖೆ ವೇಳೆ ಅಯ್ಯರ್ಬಾಡಿ ಬೀಟ್ನಲ್ಲಿ ತಾತ್ಕಾಲಿಕ ಅರಣ್ಯ ನೌಕರರಾಗಿ ಕೆಲಸ ಮಾಡುತ್ತಿದ್ದ ಪ್ರೇಮದಾಸ್ (29) ಮತ್ತು ರಾಮನ್ (35) ಭಾಗಿಯಾಗಿರುವುದು ತಿಳಿದುಬಂದಿದೆ. ನಂತರ, ಅಧಿಕಾರಿಗಳು ಆ ಇಬ್ಬರು ಸಿಬ್ಬಂದಿ ಸೇರಿದಂತೆ ಎಲ್ಲಾ ಐದು ಜನರನ್ನು ಬಂಧಿಸಿದ್ದಾರೆ.

ಮೃತ ಆನೆಯ ದಂತಗಳನ್ನು ಕದ್ದು ಮಾರಾಟ ಮಾಡಲು ಯತ್ನಿಸಿದ್ದಕ್ಕಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಆರೋಪಿ ಮಣಿಕಂಠನ್ 2021 ರಲ್ಲಿ ಇದೇ ರೀತಿಯ ಆನೆ ದಂತ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದ.
ಪ್ರಕರಣದ ಕುರಿತು ಮಾತನಾಡಿದ ಅರಣ್ಯಾಧಿಕಾರಿ ಗಿರೀಧರನ್, “ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅರೆಕಾಲಿಕ ಸಿಬ್ಬಂದಿ ಮತ್ತು ಬೇಟೆ ನಿಗ್ರಹ ಸಿಬ್ಬಂದಿ ಸೇರಿದಂತೆ ಐದು ಜನರನ್ನು ಬಂಧಿಸಲಾಗಿದೆ. ಪ್ರಸ್ತುತ, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ, ಅಣ್ಣಾಮಲೈ ಹುಲಿ ಮೀಸಲು ಪ್ರದೇಶದ ದಟ್ಟ ಕಾಡುಗಳು ಮತ್ತು ಅನುಮಾನಾಸ್ಪದವಾಗಿ ಓಡಾಡುವ ಜನರ ಮೇಲೆ ನಿಗಾ ಇಡಲಾಗುವುದು. ಆರೋಪಿಗಳು ದಂತಗಳನ್ನು ಹೇಗೆ ಸಂಗ್ರಹಿಸಿದರು ಎಂಬುದರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.





