ಬೆಳಗಾವಿ : ಬೈಲಹೊಂಗಲ ತಾಲೂಕಿನ ತಿಗಡಿ–ತಿಗಡಿ ಕ್ರಾಸ್ ನಡುವಿನ ರಸ್ತೆಯಲ್ಲಿ ಸಾರಿಗೆ ಬಸ್ ಹಾಗೂ ಮಿನಿ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಪ್ರಾಣ ಹಾನಿಯಾಗಿಲ್ಲ ಎನ್ನುವುದು ಅದೃಷ್ಟಕರ ಸಂಗತಿ.
ಘಟನೆ ರವಿವಾರದಂದು ಬೆಳಗ್ಗೆ ಸಂಭವಿಸಿದ್ದು, ತಿಗಡಿ ಕಡೆಯಿಂದ ಬೈಲಹೊಂಗಲ ಕಡೆಗೆ ಪ್ರಯಾಣಿಕರನ್ನು ಹೊತ್ತಸರಿಗೆ ಬಸ್ ಸಂಚರಿಸುತ್ತಿದ್ದಾಗ, ಎದುರಿನಿಂದ ಬರುತ್ತಿದ್ದ ಇಟ್ಟಿಗೆ ತುಂಬಿದ ಮಿನಿ ಲಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಬಸ್ ಮತ್ತು ಲಾರಿಯು ಗಂಭೀರವಾಗಿ ಜಖಂ ಆಗಿದ್ದು, ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರು ಹಾಗೂ ಲಾರಿ ಚಾಲಕ ಸೇರಿದಂತೆ ಇನ್ನೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಾಹನಗಳು ನಡುರಸ್ತೆಯಲ್ಲೇ ನಿಂತಿದ್ದ ಕಾರಣ, ಸಂಚಾರದಲ್ಲಿ ಕೆಲಕಾಲ ಅಡಚಣೆ ಉಂಟಾಯಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ಬೈಲಹೊಂಗಲ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು, ಅಪಘಾತ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.







