ಜೈಪುರ: ಮದುವೆ ಮಾಡಿಸಿ 3 ತಿಂಗಳು ಕಳೆಯುವ ಮುನ್ನ ತನ್ನ ಪತಿಯ ಸಂಬಂಧಿಕನನ್ನೇ ಮದುವೆಯಾದ ಮಗಳಿಗೆ ಜೀವಂತವಿದ್ದಾಗಲೇ ಸಂತಾಪ ಸೂಚಿಸಿರುವ ತಂದೆ, ಆಕೆಯ ಅಂತ್ಯಕ್ರಿಯೆ ಮಾಡಿರುವ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಅಸಿಂದ್ ಉಪವಿಭಾಗದ ಸರೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭೈರುಲಾಲ್ ಜೋಷಿ ಎಂಬುವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಮಗಳ ಮದುವೆಯನ್ನು ಅದೇ ಗ್ರಾಮದ ನಿವಾಸಿ ಜತೆ ಈ ವರ್ಷದ ಏಪ್ರಿಲ್ನಲ್ಲಿ ಮಾಡಿಸಿದ್ದರು. ಮಗಳ ಮದುವೆ ಭಾರ ಕಳೆದುಕೊಂಡ ತಂದೆ ಸಂತೋಷದಲ್ಲಿರುವಾಗಲೇ ಮಗಳು ಕಾಣೆಯಾಗಿರುವ ಸುದ್ದಿ ಬರಸಿಡಿಲಿನಂತೆ ಬರುತ್ತದೆ.
ಕಳೆದ ಜುಲೈ 29 ರಂದು ಭಿಲ್ವಾರಾದ ಮಾಣಿಕ್ಯ ಲಾಲ್ ವರ್ಮಾ ಕಾಲೇಜಿನಲ್ಲಿ ಎಂಎ ಪರೀಕ್ಷೆಗೆ ಹಾಜರಾಗಲು ಮನೆಯಿಂದ ತೆರಳಿದ್ದ ಜೋಷಿ ಅವರ ಮಗಳು ಹಿಂತಿರುಗಿರಲಿಲ್ಲ. ಈ ಬಗ್ಗೆ ಜೋಷಿ ಜುಲೈ 30 ರಂದು ನಾಪತ್ತೆ ದೂರು ನೀಡಿದ್ದರು. ಪೊಲೀಸರು ಹತ್ತಿರದ ಪ್ರದೇಶಗಳಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರಣೆ ನಡೆಸಿದ್ದು, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆಕೆಗೆ ಕರೆ ಮಾಡಿದಾಗ ರಿಂಗ್ ಆಗುತ್ತಿದ್ದರು ಯಾರೂ ಸ್ವೀಕರಿಸುತ್ತಿರಲಿಲ್ಲ. ಬಳಿಕ ಲೊಕೇಶನ್ ಮೂಲಕ ಪತ್ತೆ ಹಚ್ಚಿದಾಗ ಆಕೆ ತನ್ನ ಪತಿಯ ಸಂಬಂಧಿಯನ್ನೇ ತನ್ನ ಸ್ವಂತ ಇಚ್ಛೆಯಿಂದ ವಿವಾಹವಾಗಿರುವುದು ತಿಳಿದು ಬಂತು ಎಂದು ಅಲ್ಲಿನ ಹೆಡ್ಕಾನ್ಸ್ಟೇಬಲ್ ಶ್ರವಣ್ ಕುಮಾರ್ ತಿಳಿಸಿದ್ದಾರೆ.
ಡಾ ವಿಷ್ಣುವರ್ಧನ್ ಸಮಾಧಿ ನೆಲಸಮ ಕಿಚ್ಚ ಸುದೀಪ್ ಬೇಸರ
ತಕ್ಷಣ ನಾವು ಕುಟುಂಬಕ್ಕೆ ಮಾಹಿತಿ ನೀಡಿ, ಮಗಳು ಎಸ್ಪಿ ಕಚೇರಿಗೆ ಹಾಜರಾಗುವ ಸಮಯದಲ್ಲಿ ಅವರೂ ಹಾಜರಿರುವಂತೆ ತಿಳಿಸಿದ್ದೆವು. ಅದರಂತೆ ಆಗಸ್ಟ್ 4ರಂದು ಕಾಣೆಯಾಗಿದ್ದ ಮಹಿಳೆ ಎಸ್ಪಿ ಮುಂದೆ ಹಾಜರಾಗಿ, ಪತಿಯ ಸಂಬಂಧಿಯನ್ನು ಸ್ವಇಚ್ಛೆಯಿಂದ ಮದುವೆಯಾಗಿರುವುದಾಗಿ ದೃಢಪಡಿಸಿದ್ದಳು. ಜತೆಗೆ ತನ್ನ ಕುಟುಂಬದಿಂದ ತನಗೆ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಹಿಳೆಯ ತಂದೆ ಜೋಷಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನನ್ನ ಮಗಳು ಪೊಲೀಸ್ ಠಾಣೆಗೆ ಬಂದಾಗ, ಅವಳು ನಮ್ಮ ವಿರುದ್ಧ ಹೇಳಿಕೆಗಳನ್ನು ನೀಡಿದ್ದಳು. ನನಗೆ ತುಂಬಾ ನೋವಾಯಿತು. ಹೀಗಾಗಿ ಅವಳು ನಮ್ಮ ಕುಟುಂಬದ ಪಾಲಿಗೆ ಸತ್ತಿದ್ದಾಳೆ ಎಂದು ಪರಿಗಣಿಸಲು ನಿರ್ಧರಿಸಿದೆ. ನನ್ನ ಹೆಸರಿನಲ್ಲಿ ಸಂತಾಪ ಸೂಚನೆಯನ್ನು ಮುದ್ರಿಸಲಾಗಿತ್ತು ಮತ್ತು ನಾನು ಮನೆಯಲ್ಲಿ 12 ದಿನಗಳ ಶೋಕಾಚರಣೆಯನ್ನು ನಡೆಸುತ್ತಿದ್ದೇನೆ. ಆಗಸ್ಟ್ 10 (ಇಂದು) ರಂದು ‘ಮೃತ್ಯುಭೋಜ್’ (ಮರಣೋತ್ಸವ)ವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಸಂತಾಪ ಸೂಚಿಸಿರುವ ಪತ್ರದಲ್ಲಿ ಮಗಳ ವಿವಾಹ ದಿನಾಂಕವನ್ನು ಉಲ್ಲೇಖಿಸಿದ್ದು, ಜುಲೈ 29ಕ್ಕೆ ಅವಳು ಸಾವನ್ನಪ್ಪಿದ್ದಾಳೆಂದು ಘೋಷಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ಮತ್ತು ಸಂಬಂಧಿಕರು ಶೋಕಾಚರಣೆಯ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.





