ಕರ್ನಾಟಕ ಸರ್ಕಾರ ರಾಜ್ಯದ ಜನರಿಗೆ ಬೆಲೆ ಏರಿಕೆ ಬರೆ ಮುಂದುವರೆಸಿದೆ. ಈಗಾಗಲೇ ಘೋಷಿಸಿದಂತೆ ಪರಿಷ್ಕೃತ ವಿದ್ಯುತ್ ದರ ಹಾಗೂ ಹಾಲಿನ ದರ ಇಂದಿನಿಂದ (ಏಪ್ರಿಲ್ 1 ಆರ್ಥಿಕ ವರ್ಷದಿಂದ) ಅನುಷ್ಠಾನಕ್ಕೆ ಬರಲಿದೆ. ಬಸ್, ನಮ್ಮ ಮೆಟ್ರೋ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತತ್ತರಿಸಿದ್ದ ಜನರಿಗೆ ಮತ್ತಷ್ಟು ಆರ್ಥಿಕ ಹೊರೆ ಉಂಟಾಗಲಿದೆ. ಕೆಲವೆಡೆ ದರ ಏರಿಕೆ ವಿರುದ್ಧ ಪ್ರತಿಭಟನೆ ಸಹ ನಡೆದಿವೆ.
ಮಂಗಳವಾರದಿಂದ ಗ್ರಾಹಕರಿ ಪ್ರತಿ ಲೀಟರ್ ಹಾಲಿಗೆ 4 ರೂಪಾಯಿ ಹೆಚ್ಚುವರಿ ಹಣ ನೀಡಬೇಕು. ವಿದ್ಯುತ್ ದರ ಸಹಿತ ಪ್ರತಿ ಯೂನಿಟ್ಗೆ 36 ಪೈಸೆಯಷ್ಟು ಪರಿಷ್ಕೃತಗೊಂಡಿದೆ. ಹಾಲಿನ ದರ ಮಾತ್ರವಲ್ಲದೇ ಮೊಸರಿಗೂ ದರ ರೂ.4 ಹೆಚ್ಚಾಗಿದೆ. ಇದರೊಂದಿಗೆ ಹಾಲಿನ ಉತ್ಪನ್ನಗಳು, ಸಿಹಿ ತಿನಿಸುಗಳು ಸಹ ದುಬಾರಿಯಾಗಲಿವೆ. ಈ ಹೆಚ್ಚುವರಿ ಹಣ ಹಾಲು ಪೂರೈಕೆಯ ರೈತರಿಗೆ ಸಿಗುತ್ತಾ ಅಥವಾ ಇಂಧನ, ಉತ್ಪಾದನೆ, ಸಿಬ್ಬಂದಿ ವೇತನ ಹೆಚ್ಚಳ ಎಂದು ಮಧ್ಯವರ್ತಿಗಳ ಕೈಗೆ ಸೇರುತ್ತಾ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.





