ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಗುಣಮಟ್ಟದ ವ್ಯವಸ್ಥೆ ಕಲ್ಪಿಸದಿದ್ದರೆ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದರು.
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆಯನ್ನು ತಾಯಿ ಸನ್ನಿಧಿಯಲ್ಲೇ ನಡೆಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಹಿಂದೆಯೂ ಸಮಿತಿ ಇತ್ತು. ಆದರೆ ಪ್ರಾಧಿಕಾರ ರಚನೆಯಿಂದಾಗಿ ಅಭಿವೃದ್ಧಿಗೆ ಹೆಚ್ಚಿನ ಅಧಿಕಾರ ಮತ್ತು ಅವಕಾಶ ಒದಗಿದಂತಾಗಿದೆ ಎಂದರು.
ಇಲ್ಲಿಗೆ ಬರುವ ಭಕ್ತರಿಗೆ ಹೆಚ್ಚಿನ ಮತ್ತು ಉನ್ನತ ಮಟ್ಟದ ಆರೋಗ್ಯಕರ ಸವಲತ್ತು ಹಾಗೂ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದರು. ಶ್ರೀ ಕ್ಷೇತ್ರ ಹಾಗೂ ದೇವಸ್ಥಾನದ ಸಂಪ್ರದಾಯ ಮತ್ತು ಚರಿತ್ರೆ, ಘನತೆಯನ್ನು ಕಾಪಾಡುವ ಜೊತೆಗೆ ಉನ್ನತೀಕರಿಸಬೇಕು ಎಂದರು.

ಪ್ರಾಧಿಕಾರ ವ್ಯವಸ್ಥಿತವಾಗಿ ನಡೆಯಬೇಕು. ಕಾಲ ಕಾಲಕ್ಕೆ ಸಭೆಗಳು ನಡೆದು ಹೆಚ್ಚಿನ ಶ್ರಮ ಶುಚಿತ್ವಕ್ಕೆ ಹಾಕಬೇಕು. ಕಸವನ್ನು ಆಗ್ಗಿಂದಾಗೇ ತೆರವುಗೊಳಿಸಬೇಕು. ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ವಾಹನ ನಿಲುಗಡೆಗೆ ಇನ್ನಷ್ಟು ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕಿದೆ.
ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಹಣಕ್ಕೆ ತೊಂದರೆ ಇಲ್ಲ. ಕೇಳಿದಷ್ಟು ಹಣವನ್ನು ಕೇಳಿದಾಗಲೆಲ್ಲಾ ಒದಗಿಸಲಾಗುತ್ತಿದ್ದರೂ ಕೆಲಸಗಳು ಮಾತ್ರ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಇದನ್ನು ನಾನು ಸಹಿಸಲ್ಲ. ಸಮಯಕ್ಕೆ ಸರಿಯಾಗಿ ಕೆಲಸ ಮಾಡದಿದ್ದರೆ ನಾನು ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಸಿದರು.





