
ದೆಹಲಿ ಮೂಲದ ಉಬರ್ ಚಾಲಕ ತಮ್ಮ ಕ್ಯಾಬ್ನಲ್ಲಿ ಪ್ರಯಾಣಿಕರಿಗೆ ಐಷಾರಾಮಿ ಸೇವೆಯನ್ನು ಒದಗಿಸುತ್ತಿದ್ದಾರೆ. ಕ್ಯಾಬ್ ಡ್ರೈವರ್ ಅಬ್ದುಲ್ ಖದೀರ್ ವಿಮಾನಗಳಿಗಿಂತಲೂ ಉತ್ತಮವಾದ ಕ್ಯಾಬ್ ಸೇವೆಯನ್ನು ತಮ್ಮ ಪ್ರಯಾಣಿಕರಿಗೆ ಒದಗಿಸುತ್ತಿದ್ದಾರೆ. ಇವರು ಪ್ರಯಾಣಿಕರಿಗಾಗಿ ಕ್ಯಾಬ್ನಲ್ಲಿ ಉಚಿತ ತಿಂಡಿಗಳು, ನೀರಿನ ಬಾಟಲ್, ತಂಪು ಪಾನೀಯ, ಕ್ಯಾಂಡಿ, ಚೂಯಿಂಗ್ಗಮ್, ಸುಗಂಧ ದ್ರವ್ಯ, ಪ್ರಥಮ ಚಿಕಿತ್ಸಾ ಕಿಟ್, ಹ್ಯಾಂಡ್ ಸ್ಯಾನಿಟೈಸರ್, ಔಷಧಗಳು, ಇಯರ್ಬಡ್, ಟಿಷ್ಯೂ ಪೇಪರ್, ನ್ಯೂಸ್ ಪೇಪರ್, ನಿಯತಕಾಲಿಕೆ, ವೈಫೈ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಹ ಒದಗಿಸಿಕೊಡುತ್ತಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು r/delhi ಹೆಸರಿನ ರೆಡ್ಡಿಟ್ ಪೇಜ್ ಒಂದರಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಕ್ಯಾಬ್ ಒಂದರಲ್ಲಿ ನೀರು, ಜ್ಯೂಸ್, ತಿಂಡಿಗಳಿಂದ ಹಿಡಿದು ಔಷಧಗಳವರೆಗೆ ಪ್ರಯಾಣಿಕರಿಗೆ ಅಗತ್ಯವಾಗಿ ಬೇಕಾದಂತಹ ಎಲ್ಲಾ ರೀತಿಯ ಸೌಲಭ್ಯಗಳಿರುವಂತಹ ದೃಶ್ಯವನ್ನು ಕಾಣಬಹುದು.
ಮೂರು ದಿನಗಳ ಹಿಂದೆ ಶೇರ್ ಮಾಡಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಚಾಲಕನಿಗೆ ದೇವರು ಒಳ್ಳೆಯದು ಮಾಡಲಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಹುಶಃ ವಿಮಾನದಲ್ಲಿಯೂ ಇಷ್ಟು ಸೌಲಭ್ಯ ಇಲ್ಲ ಎಂದು ಕಾಣುತ್ತೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾನು ಕೂಡಾ ಈ ಕ್ಯಾಬ್ನಲ್ಲಿ ಪ್ರಯಾಣಿಸಿದ್ದೆ, ಆ ಚಾಲಕ ತುಂಬಾ ಒಳ್ಳೆಯ ವ್ಯಕ್ತಿʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಚಾಲಕನ ಈ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.




