ಅದ್ದೂರಿಯಾಗಿ ನಡೆದ ಕಾರ್ಯ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ
ಇತಿಹಾಸ ಪ್ರಸಿದ್ಧ ಶ್ರೀ ಕಾರ್ಯ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಇಂದು ವಿಜೃಂಭಣೆಯಿಂದ ನಡೆಯಿತು. ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಹೋಬಳಿಯ ಕಾರ್ಯ ಗ್ರಾಮದಲ್ಲಿ ದೀಪಾವಳಿ ಹಬ್ಬದ ಮಾರನೇ ದಿನ ಪ್ರಾರಂಭವಾಗುವ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ನಡೆಯಲಿದೆ. ಇಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಸಿದ್ದೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಗ್ರಾಮದಿಂದ ಬೆಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ನಂತರ ಸುಮಾರು 25 ಅಡಿ ಎತ್ತರದ ಖುರ್ಜು (ತೇರು) ತಯಾರು ಮಾಡಿ ವಸ್ತ್ರಾಲಂಕಾರ, ಹೂವಿನ ಅಲಂಕಾರಗಳಿಂದ ಆ ತೇರನ್ನು ಶೃಂಗರಿಸಿ ಕಳಸರೋಹಣ ಮಾಡಿ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆರು ಅಡಿ ಎತ್ತರದ ರಥದ ಸಹಾಯದಿಂದ ಕಾರ್ಯ ಗ್ರಾಮದ ಕೊನೆಯ ಭಾಗದವರೆಗೂ ಆ ರಥವನ್ನು ಎಳೆದುಕೊಂಡು ಹೋಗಿ ತದನಂತರ ಎರಡು ಟನ್ ಭಾರವುಳ್ಳ ತೇರನ್ನು ಸುಮಾರು 200ಕ್ಕೂ ಹೆಚ್ಚು ಜನರು ಹೆಗಲ ಮೇಲೆ ಹೊತ್ತು ಸುಮಾರು 600 ಅಡಿ ಎತ್ತರದ ಶ್ರೀ ಸಿದ್ದೇಶ್ವರ ಬೆಟ್ಟಕ್ಕೆ ಹೊತ್ತುಕೊಂಡು ಹೋಗುತ್ತಾರೆ. ಅದನ್ನು ವೀಕ್ಷಿಸಲು ಲಕ್ಷಾಂತರ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದರು. ಅ.24 ರಂದು ಶುಕ್ರವಾರ ಪಲ್ಲಕ್ಕಿ ಉತ್ಸವ, ಪಂಚ ದೇವರುಗಳ ಉತ್ಸವ ಮೂರ್ತಿಗಳ ಮೆರವಣಿಗೆ ಗ್ರಾಮದಲ್ಲಿ ನಡೆಯುತ್ತದೆ. ಅ.25 ರಂದು ಶನಿವಾರ ಗ್ರಾಮದ ದರೋಬರೋ ಕೆರೆಯಲ್ಲಿ ಶ್ರೀ ಸ್ವಾಮಿಯ ತೆಪ್ಪೋತ್ಸವ ಜರುಗಲಿದೆ. ಅ.30 ರಂದು ಗುರುವಾರ ಶ್ರೀ ಸಿದ್ದೇಶ್ವರ ಸ್ವಾಮಿಯ ಬೆಟ್ಟದಲ್ಲಿ ಚಿಕ್ಕ ಜಾತ್ರಾ ಮಹೋತ್ಸವ ನಡೆಸಲಾಗುತ್ತದೆ.





