ಇವತ್ತು ಪೇಟಿಎಂ, ಫೋನ್ಪೇ, ಗೂಗಲ್ ಪೇ ಇತ್ಯಾದಿ ಯುಪಿಐ ಪ್ಲಾಟ್ಫಾರ್ಮ್ಗಳು ಜನರ ದೈನಂದಿನ ಹಣಕಾಸು ವಹಿವಾಟುಗಳಿಗೆ ಅತ್ಯಗತ್ಯ ಸಾಧನಗಳಾಗಿವೆ. ಅಂಗಡಿ ಮುಂಗಟ್ಟುಗಳಲ್ಲಿ ದಿನಸಿ ವಸ್ತುಗಳನ್ನು ಕೊಳ್ಳುವುದರಿಂದ ಹಿಡಿದು ಆಸ್ಪತ್ರೆಯಲ್ಲಿ ಪೇಮೆಂಟ್ವರೆಗೆ ಪ್ರತಿಯೊಂದಕ್ಕೂ ಯುಪಿಐ ಬಳಕೆ ಹೆಚ್ಚಾಗಿದೆ. ಈ ಯುಪಿಐ ಬಳಸಬೇಕೆಂದರೆ ಮೊಬೈಲ್ನಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ಇರಬೇಕು. ಬೇರೆ ಬೇರೆ ಕಾರಣಗಳಿಗೆ ಇಂಟರ್ನೆಟ್ ಸಂಪರ್ಕ ಸಾಧ್ಯವಾಗದೇ ಹೋಗಬಹುದು ಅಥವಾ ಕೈಕೊಡಬಹುದು. ಅಂತಹ ಸಂದರ್ಭದಲ್ಲಿ ಆನ್ಲೈನ್ನಲ್ಲಿ ಹಣ ಪಾವತಿ ಹೇಗೆ?

ಎನ್ಪಿಸಿಐ ಈ ಸಮಸ್ಯೆಗೆ ಪರಿಹಾರ ಹುಡುಕಿದೆ. ಇಂಟರ್ನೆಟ್ ಅಗತ್ಯ ಇಲ್ಲದೇ ಯುಪಿಐ ಪಾವತಿ ಸಾಧ್ಯವಾಗುವಂತಹ ಹೊಸ ಫೀಚರ್ ಅನ್ನು ರೂಪಿಸಿದೆ. ಅದು ಯುಎಸ್ಎಸ್ಡಿ ಮುಖಾಂತರ ಹಣ ಪಾವತಿಸುವ ಹೊಸ ಕ್ರಮ.
ಯುಪಿಐ ಬಳಕೆದಾರರು ತಮ್ಮ ನೊಂದಾಯಿತ ಮೊಬೈಲ್ ನಂಬರ್ನಿಂದ ಅಧಿಕೃತ ಯುಎಸ್ಎಸ್ಡಿ ಕೋಡ್ ಆದ *99# ಅನ್ನು ಡಯಲ್ ಮಾಡಿದಾಗ ವಿವಿಧ ಬ್ಯಾಂಕಿಂಗ್ ಸೇವೆಗಳಿಗೆ ಅವಕಾಶ ಸಿಗುತ್ತದೆ. ಹಣ ರವಾನಿಸುವುದು, ಅಕೌಂಟ್ ಬ್ಯಾಲನ್ಸ್ ಪರಿಶೀಲಿಸುವುದು, ಯುಪಿಐ ಪಿನ್ ಬದಲಿಸುವುದು ಇತ್ಯಾದಿ ಸೌಲಭ್ಯಗಳನ್ನು ಈ ಸಂದರ್ಭದಲ್ಲಿ ಪಡೆಯಬಹುದು.
ಯುಎಸ್ಎಸ್ಡಿ ಕೋಡ್ ಮೂಲಕ ಹಣ ಪಾವತಿಸುವ ಕ್ರಮ ಹೇಗೆ?
• ಬ್ಯಾಂಕ್ನೊಂದಿಗೆ ನೊಂದಾಯಿತವಾಗಿರುವ ಮೊಬೈಲ್ ನಂಬರ್ನಿಂದ *99# ಅನ್ನು ಡಯಲ್ ಮಾಡಿ.
• ಇದು ಐವಿ ಕಾಲ್ ಆಗಿದ್ದು, ನಿಮಗೆ ಬೇಕಾದ ಭಾಷೆ ಆಯ್ಕೆ ಮಾಡಿಕೊಳ್ಳಿ.
• ಹಣ ರವಾನೆ, ಬಾಕಿ ಹಣ ಪರಿಶೀಲನೆ, ವಹಿವಾಟು ವಿವರ ವೀಕ್ಷಣೆ ಇತ್ಯಾದಿ ಸೌಲಭ್ಯಗಳಲ್ಲಿ ನಿಮಗೆ ಬೇಕಾದ್ದನ್ನು ಆಯ್ದುಕೊಳ್ಳಬಹುದು.
• ಹಣ ಕಳುಹಿಸಬೇಕೆಂದಿದ್ದರೆ ‘1’ ಅನ್ನು ಟೈಪ್ ಮಾಡಬಹುದು. ಬಳಿಕ ಸೆಂಡ್ ಅನ್ನು ಒತ್ತಿರಿ.
• ಆಗ ಮೊಬೈಲ್ ನಂಬರ್, ಯುಪಿಐ ಐಡಿ, ಮೊಬೈಲ್ನಲ್ಲಿ ಸೇವ್ ಆಗಿರುವ ಕಾಂಟ್ಯಾಕ್ಟ್ ಇತ್ಯಾದಿ ಹಣ ಕಳುಹಿಸುವ ವಿಧಾನಗಳ ಆಯ್ಕೆ ಇರುತ್ತದೆ.
ಯಾವುದಾದರೊಂದನ್ನು ಆಯ್ದುಕೊಂಡು, ಸೆಂಡ್ ಒತ್ತಿರಿ.
• ಮೊಬೈಲ್ ನಂಬರ್ ಅನ್ನು ನೀವು ಆಯ್ದುಕೊಂಡರೆ ಆಗ ನೀವು ಹಣ ಕಳುಹಿಸಬೇಕಾದ ವ್ಯಕ್ತಿಯ ಮೊಬೈಲ್ ನಂಬರ್ ಅನ್ನು ನಮೂದಿಸಿ, ಸೆಂಡ್ ಒತ್ತಿರಿ.
• ಯುಪಿಐ ಐಡಿ ಆಯ್ಕೆ ಮಾಡಿಕೊಂಡಿದ್ದರೆ ಆಗ ಆ ವ್ಯಕ್ತಿಯ ಯುಪಿಐ ಐಡಿಯನ್ನು ನಮೂದಿಸಬೇಕಾಗುತ್ತದೆ.
• ಈಗ ಎಷ್ಟು ಹಣ ಪಾವತಿಸಬೇಕು, ಆ ಮೊತ್ತವನ್ನು ನಮೂದಿಸಿ, ಸೆಂಡ್ ಒತ್ತಿರಿ.
• ಆ ಹಣ ಪಾವತಿ ಯಾಕೆಂದು ನೀವು ವಿವರ ಬರೆಯುವ ಅವಕಾಶ ಇರುತ್ತದೆ. ಇದು ಅನಗತ್ಯ ಎನಿಸಿದರೆ ನಿರ್ಲಕ್ಷಿಸಬಹುದು.
• ಈಗ ಕೊನೆಯ ಕ್ರಮವಾಗಿ ನೀವು ನಿಮ್ಮ ಯುಪಿಐ ಪಿನ್ ನಂಬರ್ ಅನ್ನು ಎಂಟ್ರ ಮಾಡಬೇಕು. ಆಗ ಹಣ ರವಾನೆ ಕಾರ್ಯ ಪೂರ್ಣಗೊಳ್ಳುವುದು.





