
ಪ್ರಕಟಗೊಂಡಿರುವ ವೇಳಾಪಟ್ಟಿಯ ಪ್ರಕಾರ ಪಂದ್ಯಾವಳಿ ಜೂನ್ 12 ರಂದು ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಜುಲೈ 5 ರಂದು ಲಾರ್ಡ್ಸ್ನಲ್ಲಿ ನಡೆಯಲಿದೆ. ಈ ವೇಳಾಪಟ್ಟಿಯಲ್ಲಿನ ದೊಡ್ಡ ಸುದ್ದಿಯೆಂದರೆ ಭಾರತ ಮತ್ತು ಪಾಕಿಸ್ತಾನ ಈ ಪಂದ್ಯಾವಳಿಯಲ್ಲಿ ಒಂದೇ ಗುಂಪಿನಲ್ಲಿವೆ. ಈ ಪಂದ್ಯಾವಳಿಯಲ್ಲಿ ಎರಡೂ ತಂಡಗಳು ಯಾವಾಗ ಮುಖಾಮುಖಿಯಾಗುತ್ತವೆ ಮತ್ತು ಈ ಎರಡೂ ತಂಡಗಳು ಎಷ್ಟು ಬಾರಿ ಮುಖಾಮುಖಿಯಾಗಬಹುದು ಎಂಬುದರ ವಿವರ ಇಲ್ಲಿದೆ.

2026 ರ ಮಹಿಳಾ ಟಿ20 ವಿಶ್ವಕಪ್ನ ಮಹತ್ವದ ಪಂದ್ಯವು ಭಾರತ ಮತ್ತು ಪಾಕಿಸ್ತಾನ ನಡುವೆ ಜೂನ್ 14 ರಂದು ಎಡ್ಜ್ಬಾಸ್ಟನ್ನಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2:30 ಕ್ಕೆ ಆರಂಭವಾಗಲಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿದ್ದು, ತಲಾ 6 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಂತೆ ಭಾರತ ಮತ್ತು ಪಾಕಿಸ್ತಾನ ಜೊತೆಗೆ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಎರಡು ಅರ್ಹತಾ ತಂಡಗಳು ಗುಂಪು 1 ರಲ್ಲಿ ಸ್ಥಾನ ಪಡೆದಿದ್ದರೆ, ಗುಂಪು 2 ರಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಎರಡು ಅರ್ಹತಾ ತಂಡಗಳು ಸೇರಿವೆ.





