ಮೈಸೂರು, ಜೂನ್ 26: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ರಾಜ್ಯ ಸರ್ಕಾರ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಅದೇ ರೀತಿ ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಯತ್ನವನ್ನು ಕೈಬಿಡಬೇಕು ಹಾಗೂ ಸಾರಿಗೆ ನಿಗಮಗಳ ನಷ್ಟದ ನೆಪದಲ್ಲಿ ಮತ್ತೆ ಬಸ್ ಪ್ರಯಾಣ ದರ ಹೆಚ್ಚಿಸುವ ಪ್ರಸ್ತಾವವನ್ನು ಸರ್ಕಾರ ತಕ್ಷಣವೇ ತಿರಸ್ಕರಿಸಬೇಕು ಎಂದು ಎಸ್‌ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಆಗ್ರಹಿಸಿದರು.
ಇಂದು ಮೈಸೂರಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಜನಹಿತಕ್ಕೆ ಸಂಬಂಧಿಸಿದ ಮೂರು ಮಹತ್ವದ ವಿಷಯಗಳ ಕುರಿತು ಎಸ್‌ಡಿಪಿಐ ಪಕ್ಷದ ನಿಲುವನ್ನು ವಿವರಿಸಿದರು.
1. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹಕ್ಕು ರಕ್ಷಣೆ ಸರ್ಕಾರದ ಹೊಣೆ
ಭಾರತದ ಚುನಾವಣಾ ಆಯೋಗವು ದೇಶಾದ್ಯಂತ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಅದರ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿಯೇ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಹೀಗಾಗಿ ಯಾವುದೇ ಅರ್ಹ ಮತದಾರರ ಹೆಸರು ಅನಗತ್ಯವಾಗಿ ಮತದಾರರ ಪಟ್ಟಿಯಿಂದ ಕೈಬಿಡದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯೂ ಆಗಿದೆ ಎಂದು ಅಬ್ದುಲ್ ಮಜೀದ್ ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಪರಿಶೀಲನೆ ವೇಳೆ “Logical Discrepancy” ಎಂಬ ಕಾರಣವನ್ನು ಉಲ್ಲೇಖಿಸಿ ಲಕ್ಷಾಂತರ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ವರದಿಗಳು ಆತಂಕಕಾರಿ ಬೆಳವಣಿಗೆಯಾಗಿದೆ. ಭಾರತದಂತಹ ಬಹುಭಾಷಾ, ಬಹುಸಂಸ್ಕೃತಿಯ ದೇಶದಲ್ಲಿ ಹೆಸರುಗಳ ಕಾಗುಣಿತ ಅಥವಾ ದಾಖಲೆಗಳಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳನ್ನು ಆಧಾರವಾಗಿಸಿಕೊಂಡು ಮತದಾರರನ್ನು ಹೊರಗಿಡುವುದು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.
ಕೃತಕ ಬುದ್ಧಿಮತ್ತೆಯ ತಾಂತ್ರಿಕ ದೋಷ ಅಥವಾ ಆಡಳಿತಾತ್ಮಕ ಲೋಪದಿಂದ ಒಬ್ಬ ಅರ್ಹ ನಾಗರಿಕನೂ ಮತದಾನದ ಹಕ್ಕು ಕಳೆದುಕೊಳ್ಳಬಾರದು. ಆದ್ದರಿಂದ ರಾಜ್ಯ ಸರ್ಕಾರ ಚುನಾವಣಾ ಆಯೋಗದೊಂದಿಗೆ ಚರ್ಚಿಸಿ, “Logical Discrepancy”ಯನ್ನು ಮತದಾರರನ್ನು ಕೈಬಿಡುವ ಮಾನದಂಡವಾಗಿ ಬಳಸಬಾರದು ಎಂದು ಒತ್ತಾಯಿಸಬೇಕು. ಯಾವುದೇ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಮೊದಲು ಮನೆ-ಮನೆಗೆ ಪರಿಶೀಲನೆ, ನೇರ ಭೇಟಿ ಹಾಗೂ ಸಂಬಂಧಪಟ್ಟ ವ್ಯಕ್ತಿಗೆ ಪೂರ್ವ ನೋಟಿಸ್ ನೀಡುವಂತಹ ಮಾನವೀಯ ಮತ್ತು ಪಾರದರ್ಶಕ ಕ್ರಮಗಳನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
2. ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ಜನವಿರೋಧಿ ಕ್ರಮ
ರಾಜ್ಯ ಸರ್ಕಾರ ವಿದ್ಯುತ್ ವಿತರಣಾ ಸಂಸ್ಥೆಗಳ (ESCOMs) ಕಾರ್ಯಾಚರಣೆಯನ್ನು ಹಂತ ಹಂತವಾಗಿ ಖಾಸಗಿ ಕಂಪನಿಗಳಿಗೆ ಒಪ್ಪಿಸುವ ಪ್ರಯತ್ನ ನಡೆಸುತ್ತಿರುವ ವರದಿಗಳು ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಉಂಟುಮಾಡಿವೆ ಎಂದು ಅಬ್ದುಲ್ ಮಜೀದ್ ಹೇಳಿದರು.
ವಿದ್ಯುತ್ ಎಂಬುದು ಸಾಮಾನ್ಯ ವಾಣಿಜ್ಯ ವಸ್ತುವಲ್ಲ; ಅದು ಜನಜೀವನ, ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾ ಅಭಿವೃದ್ಧಿಯ ಬೆನ್ನೆಲುಬಾಗಿದೆ. ಈ ಸೇವೆಯನ್ನು ಖಾಸಗಿ ಕಂಪನಿಗಳ ಲಾಭದ ಉದ್ದೇಶಕ್ಕೆ ಒಪ್ಪಿಸಿದರೆ ವಿದ್ಯುತ್ ದರ ಏರಿಕೆ, ಗ್ರಾಮೀಣ ಪ್ರದೇಶಗಳ ನಿರ್ಲಕ್ಷ್ಯ ಹಾಗೂ ಸೇವೆಯ ಗುಣಮಟ್ಟ ಕುಸಿಯುವ ಅಪಾಯವಿದೆ.
ಸರ್ಕಾರ ಖಾಸಗೀಕರಣದ ಮೂಲಕ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುವ ಬದಲು, ಎಸ್ಕಾಂಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ, ತಾಂತ್ರಿಕ ಸುಧಾರಣೆಗಳನ್ನು ಜಾರಿಗೆ ತಂದು, ಸಾರ್ವಜನಿಕ ಸ್ವಾಮ್ಯದಲ್ಲಿಯೇ ಉತ್ತಮ ಗುಣಮಟ್ಟದ ವಿದ್ಯುತ್ ಸೇವೆ ಒದಗಿಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
3. ಬಸ್ ದರ ಏರಿಕೆ ಪ್ರಸ್ತಾವವನ್ನು ಸರ್ಕಾರ ತಕ್ಷಣ ತಿರಸ್ಕರಿಸಲಿ
ರಾಜ್ಯದ ರಸ್ತೆ ಸಾರಿಗೆ ನಿಗಮಗಳು ಮತ್ತೊಮ್ಮೆ ಬಸ್ ಪ್ರಯಾಣ ದರ ಹೆಚ್ಚಿಸುವ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ ಎಂದು ಅಬ್ದುಲ್ ಮಜೀದ್ ಹೇಳಿದರು.
ಈಗಾಗಲೇ 2025ರ ಜನವರಿ 5ರಿಂದ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲಾಗಿದೆ. ಇದೀಗ ಬಿಎಂಟಿಸಿ ಶೇ.44, ಕೆಎಸ್‌ಆರ್‌ಟಿಸಿ ಶೇ.33 ಹಾಗೂ ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯೂಕೆಆರ್‌ಟಿಸಿಗಳೂ ದರ ಏರಿಕೆಗೆ ಪ್ರಸ್ತಾವ ಸಲ್ಲಿಸಿರುವುದು ಸಾಮಾನ್ಯ ಜನರ ಬದುಕಿನ ಮೇಲೆ ಮತ್ತಷ್ಟು ಹೊರೆ ಹೊರಿಸುವ ಕ್ರಮವಾಗಿದೆ.
ಬೆಲೆ ಏರಿಕೆ, ನಿರುದ್ಯೋಗ ಹಾಗೂ ಜೀವನೋಪಾಯದ ಸಂಕಷ್ಟದಿಂದ ಜನರು ತತ್ತರಿಸಿರುವ ಸಂದರ್ಭದಲ್ಲಿ ಮತ್ತೆ ಬಸ್ ದರ ಹೆಚ್ಚಿಸುವುದು ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ಮಹಿಳೆಯರು, ಉದ್ಯೋಗಿಗಳು ಹಾಗೂ ಪ್ರತಿದಿನ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಲಕ್ಷಾಂತರ ಜನರಿಗೆ ದೊಡ್ಡ ಹೊಡೆತವಾಗಲಿದೆ.
ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟಕ್ಕೆ ಪ್ರಯಾಣಿಕರು ಕಾರಣರಲ್ಲ. ಸರ್ಕಾರದ ನೀತಿ ವೈಫಲ್ಯ, ಸಮರ್ಪಕ ಅನುದಾನದ ಕೊರತೆ ಮತ್ತು ಆಡಳಿತಾತ್ಮಕ ದೌರ್ಬಲ್ಯವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ವೈಫಲ್ಯದ ಹೊರೆ ಜನರ ಮೇಲೆ ಹಾಕುವುದು ಸರಿಯಲ್ಲ. ಸರ್ಕಾರ ದರ ಏರಿಕೆಯನ್ನು ಸುಲಭ ಪರಿಹಾರವಾಗಿ ಪರಿಗಣಿಸದೆ, ನಿಗಮಗಳ ಆರ್ಥಿಕ ಪುನಶ್ಚೇತನಕ್ಕಾಗಿ ಸಮಗ್ರ ಕಾರ್ಯಯೋಜನೆ ರೂಪಿಸಬೇಕು. ಬಸ್ ದರ ಏರಿಕೆ ಪ್ರಸ್ತಾವವನ್ನು ತಕ್ಷಣವೇ ತಿರಸ್ಕರಿಸಿ ಜನಸಾಮಾನ್ಯರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು.
ಅಂತಿಮವಾಗಿ, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು, ಸಾರ್ವಜನಿಕ ವಿದ್ಯುತ್ ಸೇವೆ ಹಾಗೂ ಕೈಗೆಟುಕುವ ಸಾರ್ವಜನಿಕ ಸಾರಿಗೆ ಇವು ಜನರ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಾಗಿದ್ದು, ಸರ್ಕಾರವು ಜನವಿರೋಧಿ ನೀತಿಗಳನ್ನು ಕೈಬಿಟ್ಟು ಜನಪರ ಆಡಳಿತಕ್ಕೆ ಆದ್ಯತೆ ನೀಡಬೇಕು ಎಂದು ಅಬ್ದುಲ್ ಮಜೀದ್ ಕರೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ, ರಾಜ್ಯ ಕಾರ್ಯದರ್ಶಿ ಮೌಲಾನಾ ಅಕ್ರಮ್, ರಾಜ್ಯ ಕೋಶಾಧಿಕಾರಿ ಅಮ್ಜದ್ ಖಾನ್, ಮೈಸೂರು ಜಿಲ್ಲಾ ಕಾರ್ಯಾಧ್ಯಕ್ಷ ಶಫಿವುಲ್ಲಾ ಹಾಗೂ ಜಿಲ್ಲಾ ಉಪಾಧ್ಯಕ್ಷ ಎಸ್. ಸ್ವಾಮಿ ಉಪಸ್ಥಿತರಿದ್ದರು.
– ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI), ಕರ್ನಾಟಕ




