‘ಟಾಕ್ಸಿಕ್’ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯ ಹಾಗೂ ವಿಭಿನ್ನ ಆವತಾರಕ್ಕೆ ಸ್ಯಾಂಡಲ್‌ವುಡ್ ಮಂದಿ ಫಿದಾ ಆಗಿದ್ದು, ಇದೀಗ ಕಿಚ್ಚ ಸುದೀಪ್ ಪುತ್ರಿ, ಗಾಯಕಿ ಸಾನ್ವಿ ಸುದೀಪ್ ಕೂಡ ಯಶ್ ಅವರ ಪರ್ಫಾರ್ಮೆನ್ಸ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ರಿಷಬ್ ಶೆಟ್ಟಿ, ರಕ್ಷಿತಾ ಪ್ರೇಮ್ ಹಾಗೂ ಸ್ವತಃ ಕಿಚ್ಚ ಸುದೀಪ್ ಸೇರಿದಂತೆ ಹಲವು ಗಣ್ಯರು ಸಿನಿಮಾದ ಅದ್ಧೂರಿ ಮೇಕಿಂಗ್ ಮತ್ತು ಯಶ್ ಪಟ್ಟ ಶ್ರಮವನ್ನು ಕೊಂಡಾಡಿದ್ದರು. ಈ ಸಾಲಿಗೆ ಸೇರಿರುವ ಸಾನ್ವಿ, ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಯಶ್ ಅಭಿನಯವನ್ನು ವಿಶೇಷವಾಗಿ ಹೊಗಳಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಅನಿಸಿಕೆ ಹಂಚಿಕೊಂಡಿರುವ ಸಾನ್ವಿ, ಯಶ್ ಸಾಧನೆಯನ್ನು ‘ಅದ್ಭುತ’ ಎಂಬ ಒಂದೇ ಪದದಲ್ಲಿ ಬಣ್ಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಯಶ್ ಕೇವಲ ಅಭಿನಯಿಸಿಲ್ಲ, ಬದಲಿಗೆ ಸಿನಿಮಾದ ಪ್ರತಿಯೊಂದು ಫ್ರೇಮ್‌ನಲ್ಲೂ ತಮ್ಮದೇ ಆದ ಮ್ಯಾಜಿಕ್ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಸಿನಿಮಾ ಮುಗಿದು ಎಂಡ್ ಕ್ರೆಡಿಟ್ಸ್ ಬಂದ ಮೇಲೆಯೂ ಮನಸ್ಸಿನಲ್ಲಿ ಹಾಗೇ ಉಳಿದುಕೊಳ್ಳುವಂತಹ ಅಭಿನಯ ಅವರದ್ದು ಎಂದಿರುವ ಅವರು, ತಾನೊಬ್ಬ ಎಷ್ಟು ಶ್ರೇಷ್ಠ ಹಾಗೂ ಕೌಶಲಪೂರ್ಣ ನಟ ಎಂಬುದನ್ನು ಯಶ್ ವಿಶ್ವಕ್ಕೆ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವತಃ ಸುದೀಪ್ ಅವರು ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ ಬೆನ್ನಲ್ಲೇ, ಅವರ ಪುತ್ರಿ ಸಾನ್ವಿ ಕೂಡ ಯಶ್ ಅವರ ಮಾಸ್ ಆವತಾರ ಹಾಗೂ ನಟನೆಯನ್ನು ಕೊಂಡಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.




