ರಾಜ್ಯ ಸರ್ಕಾರವು ಇತ್ತೀಚೆಗೆ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡಬೇಕು ಎಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ, ವಕೀಲ ಗಿರೀಶ್ ಭಾರದ್ವಾಜ್ ಅವರು ವಕೀಲ ಅಂಗದ್ ಕಾಮತ್ ಅವರ ಮೂಲಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದಾರೆ. ಸೆಪ್ಟೆಂಬರ್ 3ರ ಸಚಿವ ಸಂಪುಟ ಸಭೆಯ ತೀರ್ಮಾನದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಸೆಪ್ಟೆಂಬರ್ 8ರಂದು ಈ ಕುರಿತು ಹೊರಡಿಸಿರುವ ಆದೇಶವು ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳಿಗೆ ನೇರವಾಗಿ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಕೇಂದ್ರ ಸರ್ಕಾರದ ಪ್ರೋಟೋಕಾಲ್ ಪ್ರಕಾರ ‘ವಂದೇ ಮಾತರಂ’ ಗೀತೆಯ ಆರು ಚರಣಗಳ ಸಂಪೂರ್ಣ ಸಂಯೋಜನೆಯೇ ಅಧಿಕೃತ ರೂಪವಾಗಿದ್ದು, ಅದನ್ನು ರಾಜ್ಯ ಸರ್ಕಾರವು ಕಾರ್ಯಾಂಗ ಆದೇಶದ ಮೂಲಕ ಬದಲಾಯಿಸಲು ಬರುವುದಿಲ್ಲ ಎಂಬುದು ಅರ್ಜಿಯ ಮುಖ್ಯ ಉಲ್ಲೇಖವಾಗಿದೆ.
ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ-I (ನಮೂದು 97) ಹಾಗೂ ವಿಧಿ 248ರ ಅಡಿಯಲ್ಲಿ ರಾಷ್ಟ್ರೀಯ ಸಂಕೇತಗಳ ಸ್ವರೂಪ ನಿಗದಿಪಡಿಸುವ ಅಧಿಕಾರ ಸಂಸತ್ತಿಗೆ ಮಾತ್ರವಿದೆ. ವಿಧಿ 162, 256 ಮತ್ತು 257(1) ರ ಪ್ರಕಾರ ರಾಜ್ಯ ಸರ್ಕಾರಕ್ಕೆ ಕೇಂದ್ರದ ಕಾಯ್ದೆ ಹಾಗೂ ಅಧಿಕಾರಕ್ಕೆ ವಿರುದ್ಧವಾಗಿ ಕಾರ್ಯಾಂಗ ಆದೇಶ ಹೊರಡಿಸುವ ಅಧಿಕಾರವಿಲ್ಲ. ಅಲ್ಲದೆ, ರಾಷ್ಟ್ರಗೀತೆಯ ಗಾಯನಕ್ಕೆ ಕಾನೂನು ರಕ್ಷಣೆ ನೀಡುವ ‘Prevention of Insults to National Honour (Amendment) Act, 2026’ ಕಾಯ್ದೆಗೂ ರಾಜ್ಯ ಸರ್ಕಾರದ ಈ ಕ್ರಮ ತದ್ವಿರುದ್ಧವಾಗಿದೆ. ಈ ಹಿಂದೆ ಬಂದ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳು ಪ್ರಸಕ್ತ ಪ್ರಕರಣಕ್ಕೆ ಅನ್ವಯಿಸುವುದಿಲ್ಲ; ಏಕೆಂದರೆ ಈ ಅರ್ಜಿಯು ವ್ಯಕ್ತಿಗತ ಕಡ್ಡಾಯ ಗಾಯನದ ಕುರಿತಾಗಿರದೆ, ಕೇಂದ್ರದ ನಿಯಮಗಳಿಗೆ ವಿರುದ್ಧವಾಗಿ ತನ್ನದೇ ಪ್ರೋಟೋಕಾಲ್ ರೂಪಿಸುವ ರಾಜ್ಯ ಸರ್ಕಾರದ ಅಧಿಕಾರವನ್ನು ಪ್ರಶ್ನಿಸಿದೆ.
ಇಷ್ಟೇ ಅಲ್ಲದೆ, ರಾಜ್ಯ ಸರ್ಕಾರವು ಈ ತೀರ್ಮಾನ ಕೈಗೊಂಡ ಪ್ರಕ್ರಿಯೆಯನ್ನೂ ಅರ್ಜಿಯಲ್ಲಿ ಬಲವಾಗಿ ಆಕ್ಷೇಪಿಸಲಾಗಿದೆ. ಸೆಪ್ಟೆಂಬರ್ 3ರ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಯಾವುದೇ ಇಲಾಖಾ ಟಿಪ್ಪಣಿ ಅಥವಾ ಕಾನೂನು ಇಲಾಖೆಯ ಸಲಹೆ ಪಡೆಯದೆ ‘ಅನೌಪಚಾರಿಕ ಚರ್ಚೆ’ (Informal Discussion) ಮೂಲಕ ನಿರ್ಧರಿಸಲಾಗಿದ್ದು, ಇದು ‘Karnataka Government (Transaction of Business) Rules, 1977’ ರ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಆದೇಶವು ಸಂವಿಧಾನದ ವಿಧಿ 19(1)(a) ಅಡಿಯಲ್ಲಿರುವ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಧಕ್ಕೆ ತರುತ್ತದೆ ಎಂದು ಹೇಳಿರುವ ಅರ್ಜಿದಾರರು, ರಾಜ್ಯದ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲೂ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಸಂಪೂರ್ಣ ಅಧಿಕೃತ ಆವೃತ್ತಿಯನ್ನೇ ಹಾಡುವಂತೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದಾರೆ.



