ಬೆಂಗಳೂರು/ದೆಹಲಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ದೆಹಲಿಯಲ್ಲಿ ನಡೆದ ಹೈಕಮಾಂಡ್ ಸಭೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಮಂಗಳವಾರ (ಮೇ 26) ನಡೆದ ಎಐಸಿಸಿ ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗೌರವಯುತವಾಗಿ ನಿರ್ಗಮಿಸಲು 15 ದಿನಗಳ ಕಾಲಾವಕಾಶ ಕೇಳಿದ್ದರು. ಆದರೆ, ಇದಕ್ಕೆ ಕಟ್ಟುನಿಟ್ಟಾಗಿ ನಿರಾಕರಿಸಿರುವ ರಾಹುಲ್ ಗಾಂಧಿ, ಮುಂಬರುವ ಗುರುವಾರದೊಳಗೇ (ಮೇ 28) ರಾಜೀನಾಮೆ ನೀಡುವಂತೆ ಖಡಕ್ ಸೂಚನೆ ನೀಡಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ದೆಹಲಿ ಪ್ರವಾಸಕ್ಕೂ ಮುನ್ನವೇ ಸಿಎಂ ಸಿದ್ದರಾಮಯ್ಯ ಅವರಿಗೆ ನಾಯಕತ್ವ ಬದಲಾವಣೆಯ ಸುಳಿವಿತ್ತಾದರೂ, ಹೈಕಮಾಂಡ್ ಈ ಮಟ್ಟಿಗೆ ಏಕಾಏಕಿ ರಾಜೀನಾಮೆಗೆ ಪಟ್ಟು ಹಿಡಿಯಬಹುದು ಎಂಬ ನಿರೀಕ್ಷೆ ಇರಲಿಲ್ಲ.
ಅನಿರೀಕ್ಷಿತ ತಿರುವು: ಕೈಕೊಟ್ಟರೇ ರಾಹುಲ್-ವೇಣುಗೋಪಾಲ್?
ಯಾವಾಗಲೂ ತಮ್ಮ ಬೆಂಬಲಕ್ಕೆ ನಿಲ್ಲುತ್ತಿದ್ದ ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಈ ಬಾರಿಯೂ ತಮ್ಮ ಪರವಾಗಿ ವಾದಿಸಬಹುದು ಎಂಬ ಬಲವಾದ ಭರವಸೆಯನ್ನು ಸಿದ್ದರಾಮಯ್ಯ ಹೊಂದಿದ್ದರು. ಈ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ ಪ್ರಸ್ತಾಪ ಮಾಡಿದಾಗಲೂ, ಸಿದ್ದರಾಮಯ್ಯ ತಾವು ರಾಹುಲ್ ಗಾಂಧಿ ಅವರ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದರು.
ಆದರೆ, ದೆಹಲಿಯ ಎಐಸಿಸಿ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ. ವೇಣುಗೋಪಾಲ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಚಿತ್ರಣವೇ ಬದಲಾಯಿತು.
ರಾಹುಲ್ ಗಾಂಧಿ ಅವರು ತಕ್ಷಣವೇ ರಾಜೀನಾಮೆ ನೀಡಲು ಸೂಚಿಸಿದಾಗ, ವೇಣುಗೋಪಾಲ್ ಕೂಡ ಅದಕ್ಕೆ ಸಮ್ಮತಿಸಿದರು.
ಇದರಿಂದ ತೀವ್ರ ನಿರಾಸೆಗೊಂಡ ಸಿದ್ದರಾಮಯ್ಯ, ಮರುಮಾತನಾಡದೆ ಸಭೆಯಿಂದ ಹೊರಬಂದಿದ್ದಾರೆ.
ಗಮನಾರ್ಹ ಸಂಗತಿ: ಸದಾ ತಮ್ಮ ಪರವಾಗಿದ್ದ ರಾಹುಲ್ ಗಾಂಧಿ ಅವರ ಈ ಹಠಾತ್ ಧೋರಣೆಯ ಬಗ್ಗೆ ಸಿದ್ದರಾಮಯ್ಯ ಅವರು ತಮ್ಮ ಆಪ್ತರ ವಲಯದಲ್ಲಿ ತೀವ್ರ ಅಸಮಾಧಾನ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಗುರುವಾರದ (ಮೇ 28) ಗಡುವು ಹತ್ತಿರವಾಗುತ್ತಿರುವುದರಿಂದ ರಾಜ್ಯ ರಾಜಕೀಯದ ಮುಂದಿನ ನಡೆ ಭಾರೀ ಕುತೂಹಲ ಮೂಡಿಸಿದೆ.




