ನಾಡಹಬ್ಬ ಮೈಸೂರು ದಸರಾ ಕುಸ್ತಿ ಅಖಾಡದಲ್ಲಿ ಪ್ರತಿವರ್ಷ ಎದುರಾಗುವ ಸೋಲು-ಗೆಲುವಿನ ವಾಗ್ವಾದಗಳು ಹಾಗೂ ಅಂಪೈರ್‌ಗಳ ತೀರ್ಪಿನ ಮೇಲಿನ ಆಕ್ಷೇಪಗಳಿಗೆ ಬ್ರೇಕ್ ಹಾಕಲು ದಸರಾ ಕುಸ್ತಿ ಉಪಸಮಿತಿ ಮಹತ್ವದ ಹೆಜ್ಜೆ ಇಟ್ಟಿದೆ. ಕ್ರಿಕೆಟ್‌ನಲ್ಲಿರುವ ‘ಥರ್ಡ್ ಅಂಪೈರ್’ ಅಥವಾ ಡಿಆರ್‌ಎಸ್ (DRS) ಮಾದರಿಯಲ್ಲಿ, ಈ ಬಾರಿ ಕುಸ್ತಿ ಪಂದ್ಯಾವಳಿಯಲ್ಲೂ ‘ವಿಡಿಯೋ ಅನಾಲಿಸಿಸ್’ ತಂತ್ರಜ್ಞಾನವನ್ನು ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ನೂರಾರು ಕುಸ್ತಿಪಟುಗಳಿಗೆ ಪಾರದರ್ಶಕ ವಾತಾವರಣ ಕಲ್ಪಿಸುವುದು ಮತ್ತು ಕಳೆದ ಬಾರಿಯಂತೆ ಅಖಾಡದಲ್ಲಿ ಎದುರಾಗಿದ್ದ ಗದ್ದಲ-ಅಸಮಾಧಾನಗಳನ್ನು ತಡೆಯುವುದು ಈ ನೂತನ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ.
ಈ ಹೊಸ ತಂತ್ರಜ್ಞಾನದಡಿ ಪಂದ್ಯದ ಪ್ರತಿಯೊಂದು ನಿರ್ಣಾಯಕ ಕ್ಷಣಗಳನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾಗುತ್ತದೆ. ಅಂಪೈರ್‌ಗಳ ತೀರ್ಪಿನಲ್ಲಿ ಸಣ್ಣ ಅನುಮಾನ ಅಥವಾ ಆಕ್ಷೇಪಣೆಗಳು ಮೂಡಿದ ತಕ್ಷಣ, ಪ್ರತ್ಯೇಕವಾಗಿ ಕುಳಿತಿರುವ ತಜ್ಞರ ತಂಡವು ವಿಡಿಯೋ ದೃಶ್ಯಗಳನ್ನು ಮರುಪರಿಶೀಲಿಸಿ (Replay) ಕರಾರುವಕ್ಕಾದ ನಿರ್ಧಾರವನ್ನು ಪ್ರಕಟಿಸಲಿದೆ. ಸಮಯದ ನಿರ್ವಹಣೆಗಾಗಿ ಕಳೆದ ಬಾರಿ ಡಿಜಿಟಲ್ ಟೈಮ್ ಬೋರ್ಡ್ ಅಳವಡಿಸಿ ಯಶಸ್ವಿಯಾಗಿದ್ದ ಸಮಿತಿ, ಈ ಬಾರಿ ‘ವಿಡಿಯೋ ಅನಾಲಿಸಿಸ್’ ಮೂಲಕ ತೀರ್ಪಿನ ವ್ಯವಸ್ಥೆಯನ್ನು ಸಂಪೂರ್ಣ ದಾಖಲಾತಿ ಆಧಾರಿತವಾಗಿಸಿ ಪಂದ್ಯಾವಳಿಗೆ ಹೊಸ ಮೆರುಗು ನೀಡಲು ಮುಂದಾಗಿದೆ.




