Air India Flight AI2913 returns to Delhi after fire indication: ಇಂದು ಬೆಳಿಗ್ಗೆ ದೆಹಲಿಯಿಂದ ಇಂದೋರ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI2913 ಒಂದು ಭಯಾನಕ ಅನಾಹುತವನ್ನು ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿಸಿದೆ. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಬಲ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ತಕ್ಷಣ ತುರ್ತು ಭೂಸ್ಪರ್ಶ (ಎಮರ್ಜೆನ್ಸಿ ಲ್ಯಾಂಡಿಂಗ್) ಮಾಡಲಾಯಿತು.
ಬೆಂಕಿಯ ಸಂಕೇತ ತಕ್ಷಣವೇ ಪತ್ತೆ: ಪೈಲಟ್ ತಕ್ಷಣ ಕಾರ್ಯಾಚರಣೆ
ಕಾಕ್ಪಿಟ್ನಲ್ಲಿ ಬೆಂಕಿಯ ಅಲಾರಂ ಬಾರಿದ ತಕ್ಷಣ, ಪೈಲಟ್ ತ್ವರಿತವಾಗಿ ಎಂಜಿನ್ ಅನ್ನು ನಿಷ್ಕ್ರಿಯಗೊಳಿಸಿ, ವಿಮಾನವನ್ನು ನಿಯಂತ್ರಣದಲ್ಲಿ ಇಟ್ಟು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದರು. ಆಗ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಲ್ಲಿ ಕೆಲವರಲ್ಲಿ ಭೀತಿ ಮೂಡಿದರೂ, ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ವಿಮಾನ ಸ್ಥಗಿತ; ಪರ್ಯಾಯ ವ್ಯವಸ್ಥೆ
ಏರ್ ಇಂಡಿಯಾ ವಕ್ತಾರರು ನೀಡಿದ ಮಾಹಿತಿಯಂತೆ, ಎಂಜಿನ್ ದೋಷದ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ. ವಿಮಾನವನ್ನು ತಾತ್ಕಾಲಿಕವಾಗಿ ಸೇವೆಯಿಂದ ಕೈಬಿಡಲಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಪರ್ಯಾಯ ವಿಮಾನವನ್ನು ಇಂದೋರ್ಗೆ ಕಳುಹಿಸಲಾಗಿದೆ.
ಏರ್ ಇಂಡಿಯಾದಲ್ಲಿ ಪದೇಪದೇ ತಾಂತ್ರಿಕ ದೋಷಗಳು: ಪ್ರಯಾಣಿಕರಲ್ಲಿ ಆತಂಕ
ಇದು ಏರ್ ಇಂಡಿಯಾಗೆ ಇದೇ ಮಾಸದಲ್ಲಿ ಸಂಭವಿಸುತ್ತಿರುವ ಮೂರನೇ ತಾಂತ್ರಿಕ ದೋಷ. ಆಗಸ್ಟ್ 18ರಂದು ಕೊಚ್ಚಿಯಿಂದ ದೆಹಲಿಗೆ ಹೊರಟಿದ್ದ ವಿಮಾನವನ್ನು ಟೇಕ್ ಆಫ್ ಮೊದಲು ನಿಲ್ಲಿಸಲಾಗಿತ್ತು. ಆಗಸ್ಟ್ 16ರಂದು ಮಿಲನ್ನಿಂದ ದೆಹಲಿಗೆ ಬರುವ ವಿಮಾನವನ್ನು ತಾಂತ್ರಿಕ ಕಾರಣದಿಂದ ರದ್ದುಗೊಳಿಸಬೇಕಾಯಿತು. ಈ ಪುನರಾವೃತ ಸಮಸ್ಯೆಗಳು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸುತ್ತಿವೆ.
ತನಿಖೆಯ ಫಲಿತಾಂಶದ ನಿರೀಕ್ಷೆಯಲ್ಲಿರುವ ಏರ್ ಇಂಡಿಯಾ, ಸಂಬಂಧಿಸಿದ ಮಾಹಿತಿ ಶೀಘ್ರದಲ್ಲೇ ಹಂಚಿಕೊಳ್ಳಲಿದೆ ಎಂದು ತಿಳಿಸಿದೆ.





