ಇರಾನ್ ಹಾಗೂ ಇಸ್ರೇಲ್-ಅಮೆರಿಕದ ನಡುವಿನ ಯುದ್ಧ ಕೇವಲ ಆ 3 ದೇಶಗಳ ನಡುವಿನ ಸಂಘರ್ಷವಾಗಿ ಉಳಿದಿಲ್ಲ. ಜಗತ್ತಿನಾದ್ಯಂತ ಹಲವು ದೇಶಗಳು ಈ ಯುದ್ಧದ ಪರಿಣಾಮವನ್ನು ಎದುರಿಸುತ್ತಿವೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ನಂತರವಂತೂ ಅನೇಕ ದೇಶಗಳಲ್ಲಿ ಇಂಧನ, ಗ್ಯಾಸ್ ಮುಂತಾದ ಮೂಲಭೂತ ಅಗತ್ಯ ವಸ್ತುಗಳ ಬಿಕ್ಕಟ್ಟು ಎದುರಾಗಿದೆ. ಈ ಯುದ್ಧ ಯಾವಾಗ ನಿಲ್ಲುತ್ತದೆ ಎಂದು ಜನರು ಕಾಯುತ್ತಿದ್ದಾರೆ.
ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಯುದ್ಧ ನಿಲ್ಲಿಸಲು ಇರಾನ್ ನಮ್ಮೊಡನೆ ಒಪ್ಪಂದಕ್ಕೆ ಒಪ್ಪುತ್ತಿಲ್ಲ ಎಂದಿದ್ದಾರೆಇರಾನ್ ಜೊತೆಗಿನ ಸಂಘರ್ಷದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇರಾನ್ ಮೇಲೆ ದಾಳಿ ನಡೆಸಲು ಇನ್ನೇನೂ ಉಳಿದಿಲ್ಲ, ಎಲ್ಲವನ್ನೂ ಧ್ವಂಸಗೊಳಿಸಲಾಗಿದೆ ಎಂದಿದ್ದ ಟ್ರಂಪ್ ಇರಾನ್ ಕದನವಿರಾಮಕ್ಕೆ ರೆಡಿ ಇದ್ದರೂ ನಾವು ಸಿದ್ಧರಿಲ್ಲ ಎಂದಿದ್ದರು. ಆದರೆ, ನಿನ್ನೆ ಬೇರೆ ರೀತಿಯದ್ದೇ ಹೇಳಿಕೆ ನೀಡಿರುವ ಅವರು ನಾವು ಇರಾನ್ ಜೊತೆ ಯುದ್ಧ ನಿಲ್ಲಿಸುವ ಬಗ್ಗೆ ಮಾತುಕತೆ ನಡೆಸಿದ್ದರೂ ಇರಾನ್ ಒಪ್ಪಂದಕ್ಕೆ ಸಿದ್ಧವಿಲ್ಲ ಎಂದು ಹೇಳಿದ್ದಾರೆ.
ಇರಾನ್- ಇಸ್ರೇಲ್, ಅಮೆರಿಕದ ನಡುವಿನ ಯುದ್ಧ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ಸಂಘರ್ಷದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಅಮೆರಿಕ ಇರಾನ್ ಜೊತೆ ಚರ್ಚೆ ನಡೆಸುತ್ತಿದೆ. ಆದರೆ ಯುದ್ಧವನ್ನು ಕೊನೆಗೊಳಿಸಲು ಇರಾನ್ ಒಪ್ಪಂದಕ್ಕೆ ಸಿದ್ಧವಾಗಿಲ್ಲ ಎಂದು ಹೇಳಿದ್ದಾರೆ.
ಭಾನುವಾರ ಏರ್ ಫೋರ್ಸ್ ಒನ್ನಲ್ಲಿ ವರದಿಗಾರರ ಜೊತೆ ಮಾತನಾಡಿದ ಟ್ರಂಪ್, “ಹೌದು, ನಾವು ಇರಾನ್ ಜೊತೆ ಮಾತನಾಡುತ್ತಿದ್ದೇವೆ” ಎಂದಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹರಡಿರುವ ಮತ್ತು ಜಾಗತಿಕ ಮಾರುಕಟ್ಟೆಗಳನ್ನು ತಲ್ಲಣಗೊಳಿಸಿರುವ ಸಂಘರ್ಷವನ್ನು ಕೊನೆಗೊಳಿಸಲು ಯಾವುದಾದರೂ ರಾಜತಾಂತ್ರಿಕತೆ ನಡೆಯುತ್ತಿದೆಯೇ ಎಂದು ಕೇಳಿದಾಗ ಅದಕ್ಕೆ ಉತ್ತರಿಸಿದ ಟ್ರಂಪ್, “ನಾವು ಮಾತುಕತೆ ನಡೆಸುತ್ತಿದ್ದೇವೆ. ಆದರೆ ಅವರು ಯುದ್ಧ ನಿಲ್ಲಿಸಲು ಸಿದ್ಧರಾಗಿದ್ದಾರೆಂದು ನನಗೆ ಅನಿಸುವುದಿಲ್ಲ” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಇರಾನ್ನ ವಿದೇಶಾಂಗ ಸಚಿವರು ಅಮೆರಿಕದ ಜೊತೆ ಯಾವುದೇ ಮಾತುಕತೆಗಳು ನಡೆಯುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ಫೆಬ್ರವರಿ 28ರಂದು, ಇರಾನ್ನ ಸುಪ್ರೀಂ ನಾಯಕ ಅಲಿ ಖಮೇನಿ ಮತ್ತು ಡಜನ್ಗಟ್ಟಲೆ ಇರಾನಿನ ಹಿರಿಯ ಅಧಿಕಾರಿಗಳು ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯ ಮೊದಲ ದಿನದಂದೇ ಪ್ರಾಣ ಕಳೆದುಕೊಂಡರು. ಇದಾದ ನಂತರ ಇರಾನ್ ಕೂಡ ಪ್ರತೀಕಾರದ ದಾಳಿ ನಡೆಸಿ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳು ಮತ್ತು ಇಸ್ರೇಲ್ ಮೇಲೆ ದಾಳಿ ನಡೆಸಿತ್ತು.






