ದಸರಾ ಸಭೆ ಬಳಿಕ ಸಚಿವರಾದ ಡಾ,ಯತೀಂದ್ರ ಸಿದ್ದರಾಮಯ್ಯ ಹಾಗೂ ಶಿವರಾಜ್ ತಂಗಡಗಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಂಬೂಸವಾರಿಯಲ್ಲಿ ಕೇವಲ 15 ಸ್ಥಬ್ಧಚಿತ್ರಗಳು
ಈ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮೆರವಣಿಗೆಯ ಸಮಯವನ್ನು ನಿಯಂತ್ರಿಸುವುದು ಮತ್ತು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುವ ಉದ್ದೇಶದಿಂದ ಕೇವಲ 15 ಸ್ಥಬ್ಧಚಿತ್ರಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

ವಿದೇಶಿ ರಾಯಭಾರಿಗಳಿಗೆ ಆಹ್ವಾನ
ಈ ವರ್ಷದ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ವಿವಿಧ ದೇಶಗಳ ವಿದೇಶಿ ರಾಯಭಾರಿಗಳು ಮತ್ತು ರಾಜತಾಂತ್ರಿಕ ಪ್ರತಿನಿಧಿಗಳಿಗೆ ಆಹ್ವಾನ ನೀಡಲು ಉದ್ದೇಶಿಸಲಾಗಿದೆ. ಇದರ ಜತೆಗೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಅಧಿಕೃತ ಆಹ್ವಾನ ನೀಡುವ ಸಾಧ್ಯತೆ ಇದೆ. ದಸರಾವನ್ನು ಕೇವಲ ರಾಜ್ಯದ ಉತ್ಸವವಾಗಿ ಮಾತ್ರವಲ್ಲದೆ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಕಾರ್ಯಕ್ರಮವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಗೋಲ್ಡ್ ಕಾರ್ಡ್ಗೆ ಈ ಬಾರಿ ಉಚಿತ ಪ್ರವೇಶವಿಲ್ಲ
ದಸರಾ ಗೋಲ್ಡ್ ಕಾರ್ಡ್ ವ್ಯವಸ್ಥೆಯಲ್ಲೂ ಈ ವರ್ಷ ಮಹತ್ವದ ಬದಲಾವಣೆ ಮಾಡಲಾಗುತ್ತಿದೆ. ಈವರೆಗೆ ಕೆಲವು ವರ್ಗಗಳಿಗೆ ಪೂರಕವಾಗಿ ನೀಡಲಾಗುತ್ತಿದ್ದ ಕಾಂಪ್ಲಿಮೆಂಟರಿ ಗೋಲ್ಡ್ ಕಾರ್ಡ್ ವ್ಯವಸ್ಥೆ ಇರುವುದಿಲ್ಲ. ಗೋಲ್ಡ್ ಕಾರ್ಡ್ ಪಡೆಯುವವರು ನಿಗದಿತ ಶುಲ್ಕ ಪಾವತಿಸಿ ಖರೀದಿಸುವುದು ಕಡ್ಡಾಯವಾಗಲಿದೆ.

ಇದೇ ಮೊದಲ ಬಾರಿ ಸೀಟ್ ನಂಬರ್ ವ್ಯವಸ್ಥೆ
ಗೋಲ್ಡ್ ಕಾರ್ಡ್ ಹೊಂದಿರುವವರಿಗಾಗಿ ಇದೇ ಮೊದಲ ಬಾರಿಗೆ ಸೀಟ್ ನಂಬರ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಗೋಲ್ಡ್ ಕಾರ್ಡ್ನಲ್ಲಿ ನಮೂದಿಸಲಾಗಿರುವ ಸೀಟ್ ನಂಬರ್ಗೆ ಅನುಗುಣವಾಗಿಯೇ ಆಸನದಲ್ಲಿ ಕುಳಿತುಕೊಳ್ಳಬೇಕು.
ಆಸನ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗದಂತೆ ಹಾಗೂ ಕಾರ್ಯಕ್ರಮದ ವೇಳೆ ಶಿಸ್ತು ಕಾಪಾಡುವ ಉದ್ದೇಶದಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಹೀಗಾಗಿ ಈ ವರ್ಷದ ಜಂಬೂಸವಾರಿ ಮೆರವಣಿಗೆ ಹಿಂದಿನ ವರ್ಷಗಳಿಗಿಂತ ಹೆಚ್ಚು ವ್ಯವಸ್ಥಿತವಾಗಿ ಮತ್ತು ನಿಯಂತ್ರಿತವಾಗಿ ನಡೆಯುವ ನಿರೀಕ್ಷೆಯಿದೆ. ಒಟ್ಟಾರೆ, ಸಾಂಪ್ರದಾಯಿಕ ವೈಭವದ ಜತೆಗೆ ಅಂತರರಾಷ್ಟ್ರೀಯ ಪ್ರಚಾರ, ಗಣ್ಯರ ಭಾಗವಹಿಸುವಿಕೆ ಮತ್ತು ಹೊಸ ಆಡಳಿತಾತ್ಮಕ ವ್ಯವಸ್ಥೆಗಳೊಂದಿಗೆ ಈ ವರ್ಷದ ಮೈಸೂರು ದಸರಾ ಮಹೋತ್ಸವ ವಿಶೇಷ ಗಮನ ಸೆಳೆಯಲಿದೆ




