ಮುಂಬರುವ 2027-28ರ ರಾಜ್ಯ ವಿಧಾನಸಭಾ ಚುನಾವಣೆಗಳು ಹಾಗೂ 2029ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸಚಿವ ಸಂಪುಟ ಮತ್ತು ಬಿಜೆಪಿಯ 12 ಸದಸ್ಯರ ಸಂಸದೀಯ ಮಂಡಳಿಯನ್ನು ಶೀಘ್ರದಲ್ಲೇ ಪುನರ್‌ರಚಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಈ ಉನ್ನತ ಮಟ್ಟದ ಬದಲಾವಣೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಪಶ್ಚಿಮ ಬಂಗಾಳದ ನಾಯಕ ಸುವೇಂದು ಅಧಿಕಾರಿ ಅವರಿಗೆ ಮಂಡಳಿಯಲ್ಲಿ ಸ್ಥಾನ ಲಭಿಸುವ ನಿರೀಕ್ಷೆಯಿದೆ.
ಸಂಸ್ಥೆಯ ಹೊಸ ಜವಾಬ್ದಾರಿ ವಹಿಸಿಕೊಂಡಿರುವ ಹಾಗೂ ರಾಜ್ಯಸಭಾ ಅವಧಿ ಪೂರ್ಣಗೊಳಿಸಲಿರುವ ಹಾಲಿ ಸಚಿವರಿಗೆ ಸಂಪುಟದಿಂದ ಕೋಕ್ ನೀಡಿ, ಯುವ ಹಾಗೂ ಹೊಸ ಮುಖಗಳಿಗೆ ಆದ್ಯತೆ ನೀಡಲಾಗುತ್ತದೆ. ದಕ್ಷಿಣ ಭಾರತದ ಪ್ರಾತಿನಿಧ್ಯಕ್ಕೂ ಆದ್ಯತೆ ನೀಡುವ ಸಾಧ್ಯತೆಯಿದ್ದು, ಮಾಜಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಮಂಡಳಿಯಿಂದ ಕೈಬಿಡುವ ಚರ್ಚೆಗಳು ನಡೆಯುತ್ತಿವೆ. ಆರ್‌ಎಸ್‌ಎಸ್ ಬೆಂಬಲ ಹೊಂದಿರುವ ದೇವೇಂದ್ರ ಫಡ್ನವೀಸ್ ಅವರ ಪ್ರವೇಶವು ಬಿಜೆಪಿಯ ಭವಿಷ್ಯದ ನಾಯಕತ್ವದ ದೃಷ್ಟಿಯಿಂದ ಅತ್ಯಂತ ಮಹತ್ವದ ರಾಜಕೀಯ ಸ್ಥಿತ್ಯಂತರಕ್ಕೆ ನಾಂದಿ ಹಾಡಲಿದೆ ಎಂದು ವಿಶ್ಲೇಷಿಸಲಾಗಿದೆ.




