ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆ ಹಾಗೂ ರಾಜ್ಯ ಸರ್ಕಾರದ ಇತ್ತೀಚಿನ ನಿರ್ಧಾರಗಳನ್ನು ವಿರೋಧಿಸಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಹಾಲಿ ಆಡಳಿತವನ್ನು “ಪಿಕ್ಪಾಕೆಟ್ ಸರ್ಕಾರ” ಎಂದು ಖಂಡಿಸಿದ್ದಾರೆ. ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರದ ವ್ಯಾಪ್ತಿಯನ್ನು ಹಿಗ್ಗಿಸುತ್ತಿರುವುದರ ಹಿಂದೆ ನಗರದ ಅಭಿವೃದ್ಧಿಯ ಉದ್ದೇಶವಿಲ್ಲ, ಬದಲಿಗೆ ಭ್ರಷ್ಟಾಚಾರ ಮತ್ತು ಸುಲಿಗೆ ಮಾಡಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಹೊಸ ಸಾಫ್ಟ್ವೇರ್ ವ್ಯವಸ್ಥೆಗಳ ಹೆಸರಿನಲ್ಲಿ ಸರ್ಕಾರ ಸಾರ್ವಜನಿಕರ ಜೇಬಿಗೆ ಕೈಹಾಕುತ್ತಿದ್ದು, ವಿವಿಧ ನಾಗರಿಕ ಸೇವೆಗಳಿಗೆ ಬರೋಬ್ಬರಿ ₹10,000 ವರೆಗೆ ಭಾರಿ ಶುಲ್ಕ ವಿಧಿಸುತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ‘ನಿಮ್ಮ ಆಸ್ತಿ, ನಿಮ್ಮ ಹಕ್ಕು’ ಮತ್ತು ಮನೆಬಾಗಿಲಿಗೆ ದಾಖಲೆ ತಲುಪಿಸುವ ಯೋಜನೆಗಳು ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ ಸುಳ್ಳುಗಳು. ದೆಹಲಿಯ ಕಾಂಗ್ರೆಸ್ ವರಿಷ್ಠರಿಗೆ ಹಣ ರವಾನಿಸಲು ಕರ್ನಾಟಕವನ್ನು ‘ಎಟಿಎಂ’ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದಿರುವ ಅವರು, ಜನಸಾಮಾನ್ಯರನ್ನು ಸುಲಿಗೆ ಮಾಡಲು ಈ ಸರ್ಕಾರಕ್ಕೆ ಕಿಂಚಿತ್ತೂ ಸಂಕೋಚವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯನ್ನು ವ್ಯಂಗ್ಯವಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಊರಿಗೊಂದು ಕ್ಯಾಬಿನೆಟ್ ಸಭೆ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಸಚಿವ ಸಂಪುಟ ಸಭೆಗಳನ್ನು ನಡೆಸಲೆಂದೇ ಕೆಂಗಲ್ ಹನುಮಂತಯ್ಯನವರು ವಿಧಾನಸೌಧವನ್ನು ನಿರ್ಮಿಸಿದ್ದರು. ಆದರೆ ಈಗಿನ ಸರ್ಕಾರ ಜಿಲ್ಲೆಗಳಿಗೆ ದಂಡುದಂಡಾಗಿ ಹೋಗಿ ದುಂದುವೆಚ್ಚ ಮಾಡುತ್ತಾ ಪ್ರಚಾರದ ಸ್ಟಂಟ್ನಲ್ಲ ತೊಡಗಿದೆ. ವಿಧಾನಸೌಧವೇನು ‘ಟೂರಿಂಗ್ ಟಾಕೀಸಾ’ ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ಕಾರ್ಯವೈಖರಿಯನ್ನು ತೀವ್ರವಾಗಿ ತೊಳೆಯೊಗೆದಿದ್ದಾರೆ.




