ರಾಜ್ಯದಲ್ಲಿ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ ಆಲಾಪನೆಗೆ ಸಂಬಂಧಿಸಿದಂತೆ ಹೊಸ ವಿವಾದ ಭುಗಿಲೆದ್ದಿದೆ. ಗೀತೆಯನ್ನು ಪೂರ್ಣವಾಗಿ ಹಾಡುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಸಚಿವ ಶಿವರಾಜ ತಂಗಡಗಿ ಅವರ ಹೇಳಿಕೆಯನ್ನು ಶಾಸಕ ಜನಾರ್ದನ ರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ. ಗಂಗಾವತಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಕೇವಲ ತನ್ನ ವೋಟ್‌ಬ್ಯಾಂಕ್ ರಾಜಕಾರಣ ಹಾಗೂ ಕೋಮು ಓಲೈಕೆಗಾಗಿ ದೇಶವಿರೋಧಿ ಧೋರಣೆ ತಳೆದಿದೆ ಎಂದು ಆರೋಪಿಸಿದರು.
ದೇಶಕ್ಕಾಗಿ ಮತ್ತು ಭಾರತ ಮಾತೆಗೆ ಗೌರವ ಸಲ್ಲಿಸಲು ಕೇವಲ ಮೂರು ನಿಮಿಷಗಳ ಕಾಲ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುವುದರಲ್ಲಿ ತಪ್ಪೇನಿದೆ ಎಂದು ರೆಡ್ಡಿ ಪ್ರಶ್ನಿಸಿದರು. “ಪೂರ್ಣ ಗೀತೆ ಹಾಡಿದರೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿರುವುದು ದೇಶದ ಕಾನೂನು ಮತ್ತು ದೇಶಭಕ್ತಿಗೆ ಮಾಡುವ ಅಪಮಾನ. ನಾಡಗೀತೆ ಮಾದರಿಯಲ್ಲೇ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಲು ಅವಕಾಶ ನೀಡಬೇಕು. ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದವರ ವಿರುದ್ಧ ಮೆದು ಧೋರಣೆ ತಳೆಯುವ ಸರ್ಕಾರ, ದೇಶಭಕ್ತಿ ಗೀತೆ ಹಾಡಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮುಂದಾಗಿರುವುದು ಖಂಡನೀಯ,” ಎಂದು ಕಿಡಿಕಾರಿದರು.
ಇದೇ ವೇಳೆ, ವಂದೇ ಮಾತರಂ ಗೀತೆಯ ಕೊನೆಯ ಚರಣಗಳು ಬಲಪಂಥೀಯರಿಗೆ ಸೇರಿದ್ದು ಎಂದಿದ್ದ ಶಾಸಕ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರೆಡ್ಡಿ, ಬಂಕಿಮಚಂದ್ರ ಚಟರ್ಜಿ ಅವರು ರಚಿಸಿದ ಈ ಐತಿಹಾಸಿಕ ಗೀತೆಯ ಹಿನ್ನೆಲೆಯನ್ನು ಅರಿಯದೆ ಜವಾಬ್ದಾರಿರಹಿತವಾಗಿ ಮಾತನಾಡುತ್ತಿದ್ದಾರೆ ಎಂದು ಏಕವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿದರು. ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿದ್ದ ಕಾಂಗ್ರೆಸ್‌ಗೂ, ಇಂದಿನ ಸ್ವಾರ್ಥ ರಾಜಕಾರಣದ ಕಾಂಗ್ರೆಸ್‌ಗೂ ಅಂತರವಿದ್ದು, ಇಂದಿನ ನಡೆ ದೇಶದ ಭದ್ರತೆಗೆ ಅಪಾಯಕಾರಿ ಎಂದು ಅವರು ಎಚ್ಚರಿಸಿದರು.





