ತಿರುಮಲ ತಿರುಪತಿ ದೇವಸ್ಥಾನಂಗೆ (ಟಿಟಿಡಿ) ಕಲಬೆರಕೆ ತುಪ್ಪ ಪೂರೈಕೆ ಮಾಡಿದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಪ್ರಮುಖ ಕಂಪನಿ ಪ್ರಮೋಟರ್ ಒಬ್ಬನನ್ನು ಬಂಧಿಸಿದೆ.
ಎಂ/ಎಸ್ ಸುಕೃತಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರಮೋಟರ್ ಆಗಿರುವ ಕೈಲಾಶ್ ಚಂದ್ ಮಂಗಲಾ ಬಂಧಿತ ಆರೋಪಿ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಸೆಕ್ಷನ್ 19ರ ಅಡಿಯಲ್ಲಿ ಮಂಗಲಾ ಅವರನ್ನು ವಶಕ್ಕೆ ಪಡೆಯಲಾಗಿದ್ದು, ವಿಶಾಖಪಟ್ಟಣದ ಪಿಎಂಎಲ್ಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಆಧರಿಸಿ ಇಡಿ ತನಿಖೆ ಚುರುಕುಗೊಳಿಸಿತ್ತು. ಟಿಟಿಡಿಗೆ ನಕಲಿ ತುಪ್ಪ ಪೂರೈಸಲು ಕ್ರಿಮಿನಲ್ ಸಂಚು, ವಂಚನೆ, ದಾಖಲೆಗಳ ತಿದ್ದುಪಡಿ ಹಾಗೂ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿತ್ತು.
ಇಡಿ ನೀಡಿರುವ ಮಾಹಿತಿ ಪ್ರಕಾರ, ರಿಫೈನ್ಡ್ ಪಾಮ್ ಆಯಿಲ್, ಪಾಮ್ ಕರ್ನಲ್ ಆಯಿಲ್, ಪಾಮೋಲಿನ್ ಮತ್ತು ಎಂಜಿ-90, ಮೊನೊಗ್ಲಿಸರೈಡ್ಗಳು, ಮಿವಾಸೆಟ್ 400 ಹಾಗೂ ಅಸಿಟಿಕ್ ಆಸಿಡ್ ಎಸ್ಟರ್ ನಂತಹ ಹಲವು ರಾಸಾಯನಿಕಗಳನ್ನು ಬೆರೆಸಿ ಈ ನಕಲಿ ತುಪ್ಪ ತಯಾರಿಸಲಾಗುತ್ತಿತ್ತು. ಬಳಿಕ ಇದನ್ನು ‘ಅಗ್ಮಾರ್ಕ್ ಸ್ಪೆಷಲ್ ಗ್ರೇಡ್ ತುಪ್ಪ’ ಎಂದು ಬಿಂಬಿಸಿ ಟಿಟಿಡಿಗೆ ಸರಬರಾಜು ಮಾಡಲಾಗುತ್ತಿತ್ತು.
2019ರಿಂದ 2024ರ ಅವಧಿಯಲ್ಲಿ ಒಟ್ಟು ₹230 ಕೋಟಿ ಮೌಲ್ಯದ ಕಲಬೆರಕೆ ತುಪ್ಪ ಪೂರೈಕೆಯಾಗಿದ್ದು, ಇದರಲ್ಲಿ ಸುಮಾರು ₹96 ಕೋಟಿ ಮೌಲ್ಯದ ತುಪ್ಪವನ್ನು ಕೈಲಾಶ್ ಚಂದ್ ಮಂಗಲಾ ತಮ್ಮ ಕಾರ್ಖಾನೆಯಲ್ಲೇ ತಯಾರಿಸಿದ್ದರು. ಕಲಬೆರಕೆ ಸಾಮಗ್ರಿಗಳ ಖರೀದಿಯಿಂದ ಹಿಡಿದು ನಕಲಿ ತುಪ್ಪ ಉತ್ಪಾದನೆವರೆಗೆ ಮಂಗಲಾ ಪ್ರಮುಖ ಸಂಚುಕೋರನಾಗಿ ಕೆಲಸ ಮಾಡಿದ್ದಾನೆ ಎಂದು ಇಡಿ ತಿಳಿಸಿದೆ.




