
ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮಾತನಾಡಿದ ಅಲ್ಲು ಅರವಿಂದ್ ಭಾವುಕರಾದರು. ನಾವು ಈ ಬಯೋಪಿಕ್ ಮಾಡುತ್ತಿಲ್ಲ. ಅವರೇ ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅರವಿಂದ್ ಹೇಳಿದರು. ಸುಬ್ಬುಲಕ್ಷ್ಮಿ ಅವರ ಬೃಹತ್ ಭಾವಚಿತ್ರ ನೋಡಿ ಅವರಿಗೆ ಕಣ್ಣೀರು ಬಂತು. ಅದೇ ರೀತಿ ಸುಬ್ಬುಲಕ್ಷ್ಮಿ ಅವರೇ ಈ ಪಾತ್ರಕ್ಕೆ ರಶ್ಮಿಕಾ ಅವರನ್ನು ಆಯ್ಕೆ ಮಾಡಿದ್ದಾರೆ. ನಾವು ಕೇವಲ ಮಾಧ್ಯಮವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಈ ಬಯೋಪಿಕ್ ಅನ್ನು ಗೀತಾ ಆರ್ಟ್ಸ್, ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಹಾಗೂ ಬನ್ನಿ ವಾಸ್ ಗ್ಲೋಬಲ್ ನಿರ್ಮಿಸುತ್ತಿವೆ. ಮುಹೂರ್ತದ ವೇಳೆಗೆ ಆಗಮಿಸಿದ್ದ ನಟ ಕಮಲ್ ಹಾಸನ್ ಚಿತ್ರತಂಡಕ್ಕೆ ಶುಭ ಕೋರಿದರು. ಮೈಕಲ್ ಜಾಕ್ಸನ್ ಬಯೋಪಿಕ್‌ನಲ್ಲಿ ನಟಿಸುವುದು ಎಷ್ಟು ಸವಾಲೋ ಇದು ಕೂಡ ಅಷ್ಟೇ ಸವಾಲು ಎಂದು ಕಮಲ್ ಹೇಳಿದರು. ರಶ್ಮಿಕಾಗೆ ಧೈರ್ಯ ತುಂಬಿದ ಕಮಲ್, ಉತ್ತಮ ತಂಡ ನಿಮ್ಮ ಜೊತೆಗಿದೆ ಎಂದರು.
ಸಮಾರಂಭದಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ ಸಾಕಷ್ಟು ಭಾವುಕರಾಗಿದ್ದರು. ನನ್ನ ಮನಸ್ಸಿನಲ್ಲಿ ಈಗ ಕೇವಲ ಕೃತಜ್ಞತೆಯ ಭಾವನೆ ಮಾತ್ರ ಇದೆ. ಸುಬ್ಬುಲಕ್ಷ್ಮಿ ಅಮ್ಮನ ಧ್ವನಿ ಕೇಳಿದರೆ ದೇವ ಸನ್ನಿಧಿಯಲ್ಲಿ ಕುಳಿತ ಅನುಭವವಾಗುತ್ತದೆ. ಅವರ ಧ್ವನಿಯನ್ನು ಪ್ರತಿನಿಧಿಸುವುದು ಒಂದು ದೈವಿಕ ಶಕ್ತಿ ಇದ್ದಂತೆ. ಈ ಮಹಾನ್ ಅವಕಾಶ ನೀಡಿದ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ರಶ್ಮಿಕಾ ಹೇಳಿದರು.

ಈ ಚಿತ್ರವನ್ನು ಗೌತಮ್ ತಿನ್ನನೂರಿ ನಿರ್ದೇಶಿಸುತ್ತಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಈ ಸಿನಿಮಾ ಬಹುಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.




