ಕರಾವಳಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಬೆಳ್ಳಂಬೆಳಗ್ಗೆ ಮಂಗಳೂರಿನ ಹಳೆ ಬಂದರಿನ ಮೀನುಗಾರಿಕಾ ಧಕ್ಕೆಗೆ ದಿಢೀರ್ ಭೇಟಿ ನೀಡಿ, ಸ್ಥಳೀಯ ಮೀನುಗಾರರ ಕುಂದುಕೊರತೆಗಳನ್ನು ಆಲಿಸಿದರು. ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಅವರೊಂದಿಗೆ ಧಕ್ಕೆಗೆ ಆಗಮಿಸಿದ ಅವರು, ಸಂಪೂರ್ಣ ಕಾರ್ಯವೈಖರಿ ಹಾಗೂ ಮೀನುಗಾರರು ಎದುರಿಸುತ್ತಿರುವ ದೈನಂದಿನ ಸವಾಲುಗಳನ್ನು ಖುದ್ದಾಗಿ ವೀಕ್ಷಿಸಿದರು. ಬಳಿಕ, ಹೂಳಿನಿಂದ ಕೂಡಿರುವ ಹಾಗೂ ಸಂಚಾರಕ್ಕೆ ಕಷ್ಟವಾಗಿರುವ ‘ಅಳಿವೆಬಾಗಿಲು’ ನೈಜ ಪರಿಸ್ಥಿತಿ ಅರಿಯಲು ಸ್ವತಃ ಮೀನುಗಾರಿಕಾ ಬೋಟ್ ಏರಿ ಸಮುದ್ರದಲ್ಲಿ ಸಂಚರಿಸಿದರು. ಈ ವೇಳೆ ಅಳಿವೆಬಾಗಿಲ ತಾಂತ್ರಿಕ ಅಡೆತಡೆಗಳು, ಹೂಳೆತ್ತುವ ಅಗತ್ಯತೆ ಮತ್ತು ಆಳಸಮುದ್ರ ಮೀನುಗಾರಿಕೆಯ ಸಂಕಷ್ಟಗಳ ಕುರಿತು ಯು. ಟಿ. ಖಾದರ್ ಹಾಗೂ ಸ್ಥಳೀಯರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಬೋಟ್ನಲ್ಲಿದ್ದ ತಾಜಾ ಬೋಂಡಾಸ್ ಸೇರಿದಂತೆ ವಿವಿಧ ಜಾತಿಯ ಮೀನುಗಳನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದ ಡಿ. ಕೆ. ಶಿವಕುಮಾರ್ ಅವರ ನಡೆಗೆ ಮೀನುಗಾರರು ಹರ್ಷ ವ್ಯಕ್ತಪಡಿಸಿ ಜೈಕಾರ ಕೂಗಿದರು. ಇದೇ ವೇಳೆ ಮೀನುಗಾರರ ಸಂಘದ ಪ್ರತಿನಿಧಿಗಳು ಅವರಿಗೆ ಬೃಹತ್ ಗಾತ್ರದ ‘ಅಂಜಲ್’ ಮೀನನ್ನು ಪ್ರೀತಿಯಿಂದ ಉಡುಗೊರೆಯಾಗಿ ನೀಡಿದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ಅವರು, “ಕಡಲ ಮಕ್ಕಳ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಬಂದರಿನ ಮೂಲಸೌಕರ್ಯ ಮೇಲ್ದರ್ಜೆಗೇರಿಸಲಾಗುವುದು” ಎಂದು ತಿಳಿಸಿದರು. ಮಂಗಳೂರಿನಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಂಗಳೂರು ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸಲು ಮತ್ತು ಕರಾವಳಿಯನ್ನು ‘ವಿಶೇಷ ಸಮುದ್ರ ವಲಯ’ ಎಂದು ಅಧಿಸೂಚಿಸಲು ತೀರ್ಮಾನಿಸಲಾಗಿದ್ದು, ಈ ಬೆನ್ನಲ್ಲೇ ಈ ಭೇಟಿ ಪ್ರಾಮುಖ್ಯತೆ ಪಡೆದುಕೊಂಡಿದೆ.




