ಮೈಸೂರು: ಸಾರ್ವಜನಿಕವಾಗಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ಧ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿ. ನರಸೀಪುರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಮತ್ತು ಸಂಘಟಕರ ನಡುವೆ ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸರ್ಕಾರದ ವಿರುದ್ಧ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಬಿಎನ್‌ಎಸ್ (BNS) ಕಾಯ್ದೆಯ ವಿವಿಧ ಕಠಿಣ ಸೆಕ್ಷನ್‌ಗಳಾದ 132, 191, 194, 196(1)(ಎ)(ಬಿ), 299, 353(1)(ಬಿ)(ಸಿ) ಹಾಗೂ ಸೆಕ್ಷನ್ 190ರ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ಹೂಡಿದ್ದಾರೆ.
ಸರ್ಕಾರಿ ನೌಕರರು ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ವಿಭಿನ್ನ ಗುಂಪುಗಳ ನಡುವೆ ವೈರತ್ವ ಬೆಳೆಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಹಾಗೂ ಶಾಂತಿ ಭಂಗ ಉಂಟುಮಾಡಿದ ಗಂಭೀರ ಆರೋಪಗಳನ್ನು ಇವರ ವಿರುದ್ಧ ಹೊರಿಸಲಾಗಿದೆ.




