
ಕಾರಾಗೃಹದ ಅವ್ಯವಸ್ಥೆ ಮತ್ತು ಸಹ ಕೈದಿಗಳಿಂದ ಬೆದರಿಕೆ, ಕಿರುಕುಳ ಸೇರಿದಂತೆ ಇನ್ನೂ ಕೆಲವು ಸಮಸ್ಯೆಗಳನ್ನು ದರ್ಶನ್, ಸುಪ್ರೀಂಕೋರ್ಟ್ ಮುಂದೆ ಹೇಳಿಕೊಂಡಿದ್ದರು. ಈ ಸಂಬಂಧ ಕಾರಾಗೃಹ ಇಲಾಖೆಯಿಂದ ವರದಿಯನ್ನು ಸುಪ್ರೀಂಕೋರ್ಟ್ ಕೇಳಿತ್ತು. ಇದೀಗ ಎಸ್ಪಿಪಿ ಅವರು ಈ ಕುರಿತು ನ್ಯಾಯಾಲಯಕ್ಕೆ ಕೆಲವು ವಿಡಿಯೋ ಸಾಕ್ಷ್ಯಗಳ ಸಹಿತ ವಾದ ಮಂಡಿಸಿದ್ದು, ದರ್ಶನ್ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ದರ್ಶನ್ಗೆ ಇತರೆ ಕೈದಿಗಳೊಟ್ಟಿಗೆ ಸಂಪರ್ಕ ಇಲ್ಲವೆಂದು, ಅವರನ್ನು ಪ್ರತ್ಯೇಕ ಸೆಲ್ನಲ್ಲಿ ಇರಿಸಲಾಗಿದೆ ಎಂದಿದ್ದಾರೆ. ನ್ಯಾಯಾಲಯಕ್ಕೆ ಸಿಸಿಟಿವಿ ಮತ್ತು ಬಾಡಿಕ್ಯಾಮ್ಗಳ ದೃಶ್ಯಗಳನ್ನು ಸಹ ಸಲ್ಲಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಇವುಗಳ ಜೊತೆಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮಾಡುತ್ತಿಲ್ಲ, 270 ಸಾಕ್ಷ್ಯಗಳಲ್ಲಿ 10 ಸಾಕ್ಷ್ಯಗಳ ವಿಚಾರಣೆಯನ್ನೂ ಮಾಡಲಾಗಿಲ್ಲ ವಿಚಾರಣೆ ನಡೆಯುವವರೆಗೆ ತಮಗೆ ಜಾಮೀನು ನೀಡಬೇಕು ಎಂದು ಸಹ ದರ್ಶನ್ ಮನವಿ ಮಾಡಿದ್ದರು. ಈ ಬಗ್ಗೆಯೂ ಸಹ ಸುಪ್ರೀಂಕೋರ್ಟ್ ವರದಿ ಕೇಳಿತ್ತು. ಅದನ್ನೂ ಸಹ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಸುಪ್ರೀಂಕೋರ್ಟ್ಗೆ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ, ದರ್ಶನ್ ಸಲ್ಲಿಕೆ ಮಾಡಿದ್ದ ಇತರೆ ಅರ್ಜಿಗಳ ಕಾರಣಕ್ಕೆ ಮುಖ್ಯ ಆರೋಪದ ವಿಚಾರಣೆ ತಡವಾಗಿದೆ ಎಂದು ಎಸ್ಪಿಪಿ ವಾದ ಮಂಡಿಸಿದ್ದಾರೆ ಎನ್ನಲಾಗಿದೆ.
ರೇಣುಕಾ ಸ್ವಾಮಿ ಕೊಲೆಯಾಗಿ ಎರಡು ವರ್ಷಗಳಾಗುತ್ತಾ ಬಂದಿದೆ. (ಜೂನ್ 08, 2024) ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನೂ ಹಲವು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದರು. 2024ರ ಅಕ್ಟೋಬರ್ ತಿಂಗಳಲ್ಲಿ ವೈದ್ಯಕೀಯ ಚಿಕಿತ್ಸೆ ಕಾರಣ ನೀಡಿ ದರ್ಶನ್ ಜಾಮೀನು ಪಡೆದಿದ್ದರು. ಆ ಬಳಿಕ ಪವಿತ್ರಾ ಸೇರಿದಂತೆ ಇತರೆ ಕೆಲವು ಆರೋಪಿಗಳಿಗೂ ಜಾಮೀನು ನೀಡಲಾಯ್ತು. ಬಳಿಕ ದರ್ಶನ್ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡು, ಚಿತ್ರೀಕರಣವನ್ನೂ ಮುಗಿಸಿದರು. ಆದರೆ ಬೆಂಗಳೂರು ಪೊಲೀಸರು ದರ್ಶನ್ ಜಾಮೀನು ರದ್ದು ಮಾಡುವಂತೆ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದರು, ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ದರ್ಶನ್ ಹಾಗೂ ಇತರೆ ಕೆಲ ಆರೋಪಿಗಳ ಜಾಮೀನನ್ನು 2025ರ ಆಗಸ್ಟ್ ತಿಂಗಳಲ್ಲಿ ರದ್ದು ಮಾಡಿತು. ಆಗಿನಿಂದಲೂ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.




