ಅಗಲಿರುವ ಕುಟುಂಬ ಸದಸ್ಯರನ್ನು ನೆನೆದು ನಡೆಸುವ ವಿಧಿ ವಿಧಾನಗಳು , ಪೂಜೆಗಳನ್ನು ನಡೆಸುವುದು ಪಿತೃಪಕ್ಷದಲ್ಲಿ . ಈ ಆಚರಣೆಯ ಮಹತ್ವ, ಸಮಯ, ದಿನಾಂಕಗಳನ್ನು ಖ್ಯಾತ ಜ್ಯೋತಿಷ್ಯರಾದ ಡಾ.ಕೆ.ಎನ್.ಸೋಮಯಾಜಿ ಇಲ್ಲಿ ತಿಳಿಸಿದ್ದಾರೆ.ನಮ್ಮನ್ನು ಅಗಲಿದ ಪೂರ್ವಜರನ್ನು ಸ್ಮರಿಸಿ, ಗೌರವ ಸಲ್ಲಿಸುವ ಪವಿತ್ರ ಪಿತೃಪಕ್ಷ ಇಂದಿನಿಂದ (ಸೆ.27) ಆರಂಭವಾಗಿದೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯದಿಂದ ಆರಂಭವಾಗುವ ಈ 15 ದಿನಗಳ ಪರ್ವಕಾಲವು ಅ.10ರ ಮಹಾಲಯ ಅಮಾವಾಸ್ಯೆಯೊಂದಿಗೆ (ಸರ್ವಪಿತೃ ಅಮಾವಾಸ್ಯೆ) ಮುಕ್ತಾಯಗೊಳ್ಳುತ್ತದೆ.
ಪಿತೃಪಕ್ಷದಲ್ಲಿ ಹಿರಿಯರನ್ನು ನೆನೆಯುವುದು ಅತ್ಯಂತ ಶ್ರೇಷ್ಠ ಹಾಗೂ ಶ್ರೇಯಸ್ಕರ. ಈ ಸಮಯದಲ್ಲಿ ಮದುವೆ, ಗೃಹಪ್ರವೇಶದಂತಹ ಶುಭ ಕಾರ್ಯಗಳು ನಿಷಿದ್ಧ. ಏಕೆಂದರೆ ಈ 15 ದಿನಗಳನ್ನು ಪಿತೃ ಕಾರ್ಯಗಳಿಗಾಗಿಯೇ ಮೀಸಲಿಡಲಾಗಿದೆ. ಬೆಳಗ್ಗೆ ಸ್ನಾನಾದಿಗಳನ್ನು ಪೂರೈಸಿ, ಮನೆಯನ್ನು ಸ್ವಚ್ಛಗೊಳಿಸಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಶಾಸ್ರೋಕ್ತವಾಗಿ ಹಿರಿಯರನ್ನು ಸ್ಮರಿಸಿಕೊಂಡು ಪಿಂಡ ಪ್ರದಾನ ಮಾಡಬೇಕು. ಹಿರಿಯರಿಗೆ ಅರ್ಪಿಸುವ ಪಿಂಡವನ್ನು ಹರಿಯುವ ನೀರಿನಲ್ಲಿ ಬಿಡಬಹುದು. ಇಲ್ಲವೇ ಗೋವುಗಳಿಗೆ ತಿನ್ನಿಸಬಹುದು. ಅದೂ ಸಾಧ್ಯವಾಗದಿದ್ದರೆ ಭೂಮಿಯನ್ನು ಸ್ವಲ್ಪ ಅಗೆದು ಅದರಲ್ಲಿ ಮುಚ್ಚಿಡುವ ಮೂಲಕ ಪಿಂಡವನ್ನು ಪ್ರಕೃತಿಯಲ್ಲಿ ಲೀನಗೊಳಿಸಬೇಕು.ನಂತರದಲ್ಲಿ ಬಂಧು-ಮಿತ್ರರು ಕೂಡಿ ಪ್ರಸಾದ ಭೋಜನವನ್ನು ಸ್ವೀಕರಿಸಬಹುದು. ಕೆಲವರು ಪುರೋಹಿತರನ್ನು ಕರೆಸಿ ಪೂಜೆ ಸಲ್ಲಿಸಿ ಈ ಶ್ರಾದ್ಧ ಕಾರ್ಯಗಳನ್ನು ನಡೆಸುತ್ತಾರೆ. ಇನ್ನು ಕೆಲವರು ಸಮಾಧಿಗಳ ಬಳಿ ಪೂಜೆ ಸಲ್ಲಿಸಿದರೆ, ಕೆಲವರು ಹಿರಿಯರ ಭಾವಚಿತ್ರಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ಅಗಲಿದವರಿಗೆ ಭಕ್ಷ್ಯ ಭೋಜನಗಳ ಎಡೆ ಹಾಕಲು ಸಾಧ್ಯವಾಗದಿದ್ದರೂ ಅವರನ್ನು ಸ್ಮರಿಸಿಕೊಂಡು ಕೈಲಾದ ಪೂಜೆ ಸಲ್ಲಿಸಬೇಕು. ಪಿತೃಪಕ್ಷವನ್ನು ಸಾಮಾನ್ಯವಾಗಿ ಮಧ್ಯಾಹ್ನ 12ರ ನಂತರವೇ ಆಚರಿಸಬೇಕು. ಮಧ್ಯಾಹ್ನವೇ ನಮ್ಮ ಪೂರ್ವಿಕರ ಆತ್ಮಗಳು ಹೊರಗೆ ಬರುತ್ತವೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಇದೆ. ಹೀಗಾಗಿ ಮಧ್ಯಾಹ್ನದ ನಂತರ ಹಾಗೂ ರಾತ್ರಿ ವೇಳೆ ಮಾಡಬಹುದು.
ಕುಟುಂಬದಲ್ಲಿ ಯಾರಾದರೂ ನಿಧನ ಹೊಂದಿ ಸೂತಕವಿದ್ದರೆ ಅಂತಹವರು ಪಿತೃಪಕ್ಷವನ್ನು ಆಚರಿಸುವುದು ಒಳ್ಳೆಯದಲ್ಲ. ಹಾಗೆಯೇ ಸಮಾಧಿ ಸ್ಥಳಗಳಲ್ಲಿ ಅಥವಾ ಪಿತೃಪಕ್ಷದ ಪೂಜೆಯಲ್ಲಿ ಹೊಸ ಬಟ್ಟೆಗಳನ್ನು ಬಳಸಿದ್ದರೆ ಅವುಗಳನ್ನು ಅನ್ಯರಿಗೆ ದಾನವಾಗಿ ನೀಡುವುದು ಹೆಚ್ಚು ಶ್ರೇಷ್ಠ. ಹಲವು ಸಂದರ್ಭಗಳಲ್ಲಿ ನಾನಾ ರೀತಿಯ ದಾನಗಳನ್ನು ನೀಡುತ್ತೇವೆ. ಆದರೆ ಪಿತೃಪಕ್ಷದಲ್ಲಿ ಮುಖ್ಯವಾಗಿ ಅನ್ನದಾನ, ವಸ್ತ್ರದಾನ ತುಂಬಾ ಶ್ರೇಷ್ಠ. ಹಸಿದವರಿಗೆ ಅನ್ನ ಹಾಕುವುದು ಶ್ರೇಷ್ಠ ದಾನಗಳಲ್ಲಿ ಒಂದು. ಹೀಗಾಗಿ ಅವರವರ ಪದ್ಧತಿ, ಆಚರಣೆಗಳಿಗೆ ತಕ್ಕಂತೆ ಅನ್ನದಾನ, ವಸ್ತ್ರದಾನ ಮಾಡಬಹುದು.ಏಳು ತಲೆಮಾರಿನವರೆಗೆ ಪಿಂಡ ಪ್ರದಾನ:
ವಾರ್ಷಿಕ ಶ್ರಾದ್ಧದಲ್ಲಿ ತಂದೆ ಕಡೆಯ 3 ತಲೆಮಾರಿಗೆ ಮಾತ್ರ ಪಿಂಡ ಪ್ರದಾನ ಮಾಡಿದರೆ, ಪಿತೃಪಕ್ಷದಲ್ಲಿ ಐದು, ಏಳು ತಲೆಮಾರು ಹೀಗೆ ಅವರವರ ಸಂಪ್ರದಾಯಕ್ಕೆ ತಕ್ಕಂತೆ ಎಲ್ಲರನ್ನೂ ನೆನಸಿಕೊಂಡು ಪಿಂಡ ಪ್ರದಾನ ಮಾಡಲಾಗುತ್ತದೆ. ಸನಾತನ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಪಿತೃ ಪಕ್ಷದ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆ ನಮ್ಮನ್ನಗಲಿದ ಹಿರಿಯರ ಸ್ಮರಣಾರ್ಥ ತರ್ಪಣ ಅರ್ಪಿಸಿದರೆ ಅದು ಅತ್ಯಂತ ಶ್ರೇಯಸ್ಕರ. ಇದರಿಂದ ಪೂರ್ವಜರು ಸಂತುಷ್ಟರಾಗಿ ವಂಶಸ್ಥರಿಗೆ ಆಶೀರ್ವಾದ ನೀಡುತ್ತಾರೆ ಎಂಬ ನಂಬಿಕೆಯಿದೆ. ಸತ್ತ ನಂತರ ಅವರು ಎಲ್ಲಿಯೂ ಇರುವುದಿಲ್ಲ ಎನ್ನುತ್ತಾರೆ. ಅವರು ಇರುವುದಿಲ್ಲವಾದರೂ ಆವರ ಅತ್ಮಗಳು ಸಂವಹನ ನಡೆಸುತ್ತವೆ. ಮಾಡಬೇಕಿರುವ ಕೆಲಸಗಳನ್ನು ಮಾಡಿಸುತ್ತವೆ. ಕಳೆದ ಹೋಗಿರುವ ವಸ್ತುಗಳನ್ನು ಮರಳಿ ನೀಡುವಂತೆ ಮಾಡುತ್ತವೆ. ಕೆಲವು ಆತ್ಮಗಳು ಕನಸಿನಲ್ಲಿ ಬಂದು ಹೇಳಿದಂತೆ ಭಾಸವಾದರೂ ಇನ್ನು ಕೆಲವು ಆಲೋಚನೆ, ಚಿಂತನೆಗಳ ಮೂಲಕ ಸಂವಹನ ನಡೆಸುತ್ತವೆ.




