ಏಷ್ಯಾದ ಬೃಹತ್ ಕ್ರೀಡಾ ಹಬ್ಬಕ್ಕೆ “ಹೃದಯದಿಂದ ಹೃದಯಕ್ಕೆ” ಎಂಬ ಭವ್ಯ ಸಂದೇಶದೊಂದಿಗೆ ಅಧಿಕೃತ ಚಾಲನೆ ಸಿಕ್ಕಿದ್ದು, ಎರಡನೇ ದಿನವೇ ಭಾರತ ತನ್ನ ಪದಕ ಬೇಟೆಯನ್ನು ಯಶಸ್ವಿಯಾಗಿ ಆರಂಭಿಸಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಭಾರತದ ಎಲವೆನಿಲ್ ವಲರಿವನ್, ಸೋನಮ್ ಮಾಸ್ಕರ್ ಮತ್ತು ವಿದರ್ಶಾ ವಿನೋದ್ ಅವರನ್ನೊಳಗೊಂಡ ತ್ರಿವಳಿ ಪಡೆ ಭರ್ಜರಿ ಪ್ರದರ್ಶನ ನೀಡಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದೆ. ಈ ಸ್ಪರ್ಧೆಯಲ್ಲಿ ಚೀನಾ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರೆ, ಆತಿಥೇಯ ಜಪಾನ್ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
ಮತ್ತೊಂದೆಡೆ, ವೈಯಕ್ತಿಕ ವಿಭಾಗದಲ್ಲೂ ಭಾರತೀಯ ಕ್ರೀಡಾಪಟುಗಳು ಶುಭಾರಂಭ ಮಾಡಿದ್ದು, ಸೋನಮ್ ಮಾಸ್ಕರ್ ಅವರು 10 ಮೀಟರ್ ಏರ್ ರೈಫಲ್ ಅರ್ಹತಾ ಸುತ್ತಿನಲ್ಲಿ 634.1 ಅಂಕಗಳನ್ನು ಗಳಿಸಿ ಫೈನಲ್ ಹಂತಕ್ಕೇರಿದ್ದಾರೆ. ಕೇವಲ ಶೂಟಿಂಗ್ ಮಾತ್ರವಲ್ಲದೆ, ಇತರ ಕ್ರೀಡೆಗಳಲ್ಲೂ ಭಾರತದ ಜಯಭೇರಿ ಮುಂದುವರಿದಿದೆ. ಕ್ರಿಕೆಟ್ನ ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ ತಂಡವನ್ನು ಧೂಳಿಪಟ ಮಾಡಿರುವ ಭಾರತ ಮಹಿಳಾ ಕ್ರಿಕೆಟ್ ತಂಡವು ಇದೀಗ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶವನ್ನು ಎದುರಿಸಲು ಸಜ್ಜಾಗಿದೆ. ಇದರೊಂದಿಗೆ ಭಾರತೀಯ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳು ಸಹ ಇಂದು ತಮ್ಮ ಹೈ-ವೋಲ್ಟೇಜ್ ಅಭಿಯಾನವನ್ನು ಪ್ರಾರಂಭಿಸುತ್ತಿದ್ದು, ದೇಶಕ್ಕೆ ಮತ್ತಷ್ಟು ಪದಕಗಳ ನಿರೀಕ್ಷೆ ಹೆಚ್ಚಿದೆ.




