ಜಪಾನ್ನ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಭಾರತ ಮತ್ತೆ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಈ ಬಾರಿ ಒಟ್ಟು 503 ಅಥ್ಲೀಟ್ಗಳು (269 ಪುರುಷರು, 234 ಮಹಿಳೆಯರು) ಹಾಗೂ 265 ಸಹಾಯಕ ಸಿಬ್ಬಂದಿ ಸೇರಿದಂತೆ 768 ಸದಸ್ಯರ ಬೃಹತ್ ಭಾರತೀಯ ಪಡೆ ಜಪಾನ್ಗೆ ತೆರಳಿದೆ.
ಕಳೆದ ಹ್ಯಾಂಗ್ಝೋ ಏಷ್ಯನ್ ಗೇಮ್ಸ್ನಲ್ಲಿ 28 ಚಿನ್ನದೊಂದಿಗೆ ಒಟ್ಟು 106 ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದ ಭಾರತ, ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿತ್ತು. ಈ ಬಾರಿಯೂ 100ಕ್ಕೂ ಹೆಚ್ಚು ಪದಕ ಗೆಲ್ಲುವ ವಿಶ್ವಾಸ ಹೊಂದಿರುವ ಭಾರತ ತಂಡ, ಪದಕ ಪಟ್ಟಿಯಲ್ಲಿ ಅಗ್ರ-3ರೊಳಗೆ ಸ್ಥಾನ ಪಡೆಯುವ ಸ್ಪಷ್ಟ ಗುರಿ ಇಟ್ಟುಕೊಂಡಿದೆ. ಭಾರತ ಇದುವರೆಗೆ 1951 (2ನೇ ಸ್ಥಾನ) ಮತ್ತು 1962ರಲ್ಲಿ (3ನೇ ಸ್ಥಾನ) ಮಾತ್ರ ಟಾಪ್-3ರಲ್ಲಿ ಸ್ಥಾನ ಗಳಿಸಿತ್ತು.
ಕರ್ನಾಟಕದಿಂದಲೂ ಈಜುಪಟು ಶ್ರೀಹರಿ ನಟರಾಜ್, ಗಾಲ್ಫರ್ ಅದಿತಿ ಅಶೋಕ್, ಅಥ್ಲೀಟ್ಗಳಾದ ಸ್ನೇಹಾ, ಯಶಸ್ ಪಿ., ಎಂ.ಆರ್.ಪೂವಮ್ಮ, ಸಿಂಧುಶ್ರೀ, ಶಟ್ಲರ್ ಆಯುಷ್ ಶೆಟ್ಟಿ ಹಾಗೂ ಕ್ರಿಕೆಟರ್ ಶ್ರೇಯಾಂಕಾ ಪಾಟೀಲ್ ಸೇರಿದಂತೆ ಒಟ್ಟು 24 ಕ್ರೀಡಾಪಟುಗಳು ಈ ಬಾರಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಸ್ಟಾರ್ ಆಟಗಾರರ ಮೇಲೆ ಪದಕದ ನಿರೀಕ್ಷೆ:
ಬ್ಯಾಡ್ಮಿಂಟನ್ನಲ್ಲಿ ಪಿ.ವಿ.ಸಿಂಧು, ಲಕ್ಷ್ಯ ಸೇನ್, ಸಾತ್ವಿಕ್-ಚಿರಾಕ್ ಜೋಡಿ, ಅಥ್ಲೆಟಿಕ್ಸ್ನಲ್ಲಿ ಅವಿನಾಶ್ ಸಾಬ್ಳೆ, ತೇಜಿಂದರ್ ಪಾಲ್, ಬಾಕ್ಸಿಂಗ್ನಲ್ಲಿ ಲವ್ಲೀನಾ ಬೊರ್ಗೊಹೈನ್, ಕುಸ್ತಿಯಲ್ಲಿ ಅಮನ್ ಮತ್ತು ಅಂತಿಮ್ ಪಂಘಲ್, ವೇಟ್ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚಾನು ಹಾಗೂ ಶೂಟಿಂಗ್ನಲ್ಲಿ ಮನು ಭಾಕರ್ ಪ್ರಮುಖ ಪದಕ ನಿರೀಕ್ಷಿತರಾಗಿದ್ದಾರೆ. ಇದರೊಂದಿಗೆ ಭಾರತೀಯ ಕ್ರಿಕೆಟ್ ಹಾಗೂ ಕಬಡ್ಡಿ ತಂಡಗಳು ಚಿನ್ನದ ಪದಕದ ನೆಚ್ಚಿನ ತಂಡಗಳಾಗಿ ಕಣಕ್ಕಿಳಿಯಲಿವೆ.
ಟೆಕ್ಬಾಲ್ನಲ್ಲಿ ಚಾರಿತ್ರಿಕ ಪದಕದ ಹತ್ತಿರ ಭಾರತ:
ಮತ್ತೊಂದೆಡೆ, ಟೆಕ್ಬಾಲ್ ಕ್ರೀಡೆಯಲ್ಲಿ ಭಾರತಕ್ಕೆ ಚಾರಿತ್ರಿಕ ಪದಕ ಲಭಿಸುವ ಸುವರ್ಣ ಅವಕಾಶ ಸಿಕ್ಕಿದೆ. ಮಹಿಳೆಯರ ಸಿಂಗಲ್ಸ್ನಲ್ಲಿ ಭಾರತದ ಕ್ವಿಮ್ಸಿ ಜವೊಕಿಮ್ ಡಿಸೋಜಾ ಸೆಮಿಫೈನಲ್ ಪ್ರವೇಶಿಸಿದ್ದು, ಪದಕದ ಅಂಚಿನಲ್ಲಿದ್ದಾರೆ. ಶನಿವಾರ ನಡೆಯಲಿರುವ ಸೆಮೀಸ್ನಲ್ಲಿ ಗೆದ್ದರೆ ಪದಕ ಖಚಿತವಾಗಲಿದ್ದು, ಸೋತರೂ ಭಾನುವಾರ ಕಂಚಿನ ಪದಕಕ್ಕಾಗಿ ಪಂದ್ಯವಾಡಲಿದ್ದಾರೆ. ಹಾಗೆಯೇ, ಕ್ವಿಮ್ಸಿ ಮತ್ತು ಮೊಹಮದ್ ಬೇಗ್ ಜೋಡಿ ಮಿಶ್ರ ಡಬಲ್ಸ್ನ ಕ್ವಾರ್ಟರ್ಫೈನಲ್ನಲ್ಲಿ ಸೋತರೂ ರಿಪಿಕೇಜ್ ಸುತ್ತಿಗೆ ಅರ್ಹತೆ ಪಡೆದಿದ್ದು, ಕಂಚಿನ ಪದಕ ಗೆಲ್ಲುವ ರೇಸ್ನಲ್ಲಿ ಮುಂದುವರಿದಿದ್ದಾರೆ.




